ಜಿಲ್ಲೆ

ವ್ಯಸನಮುಕ್ತ ದಿನ ಅಚ್ಚುಕಟ್ಟಾಗಿ ಆಚರಿಸಲು ಡಿಸಿ ಸೂಚನೆ

ಕೊಪ್ಪಳ: ಮಹಾಂತ ಶಿವಯೋಗಿ ಸ್ವಾಮೀಜಿ ಜನ್ಮ ದಿನ ಅಂಗವಾಗಿ ಪ್ರತಿ ವರ್ಷ ಆ.1 ರಂದು ಆಚರಿಸುವ ವ್ಯಸನ ಮುಕ್ತ ದಿನಾಚರಣೆ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಅಚ್ಚುಕಟ್ಟಾಗಿ ಆಚರಿಸುವಂತೆ ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ಸೂಚಿಸಿದರು.

ದಿನಾಚರಣೆ ಅಂಗವಾಗಿ ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಗುರುವಾರ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.

ಮಹಾಂತ ಶಿವಯೋಗಿಗಳು ಜನರ ದುಶ್ಚಟ ಬಿಡಿಸಲು ಜೋಳಿಗಿ ಹಿಡಿದು ಜಾಗೃತಿ ಮೂಡಿಸಿದರು. ಜೋಳಿಗೆಯಲ್ಲಿ ಎಲ್ಲ ಚಟಗಳನ್ನು ಹಾಕಿ ದುಶ್ಚಟದಿಂದ ಮುಕ್ತರಾಗಲು ಕರೆ ಕೊಟ್ಟರು. ವ್ಯಸನ ಮುಕ್ತ ಆಂದೋಲನದ ಹರಿಕಾರರಾದರು. ಇಂತಹ ಮಹನೀಯರ ಜಯಂತಿ ಕಾರ್ಯಕ್ರಮ ಎಲ್ಲರೂ ಸೇರಿ ಆಚರಿಸಬೇಕು. ಸಮಾಜಕ್ಕೆ ಅವರ ಬಗ್ಗೆ ತಿಳಿಸಬೇಕು. ಪ್ರಮುಖವಾಗಿ ಯುವಕರನ್ನು ದುಶ್ಚಟಗಳಿಂದ ಮುಕ್ತ ಮಾಡಬೇಕಿದೆ.

ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಸೇರುವಂತೆ ಮಾಡಿ. ಶಿವಯೋಗಿಗಳ ಬಗ್ಗೆ ಚೆನ್ನಾಗಿ ಅರಿತ ಉಪನ್ಯಾಸಕರನ್ನು ಕರೆಸಿ ಉಪನ್ಯಾಸ ಕೊಡಿಸಿ. ಮದ್ಯಪಾನದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಮಕ್ಕಳಿಗೆ ತಿಳಿಸಬೇಕು. ಆಚರಣೆ ಅಷ್ಟೇ ಅಲ್ಲದೆ, ಜಾಗೃತಿ ಮೂಡಿಸಲು ಆದ್ಯತೆ ನೀಡಬೇಕೆಂದು ನಿರ್ದೇಶಿಸಿದರು.

ಎಸ್ಪಿ ಡಾ.ರಾಮ್​ ಎಲ್​.ಅರಸಿದ್ದಿ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಜಿಪಂ ಡಿಎಸ್​ ಮಲ್ಲಿಕಾರ್ಜುನ ತೊದಲಬಾಗಿ, ಜಿಲ್ಲಾ ತರಬೇತಿ ಸಂಸ್ಥೆ ಪ್ರಾಚಾರ್ಯ ಕೃಷ್ಣಮೂರ್ತಿ ದೇಸಾಯಿ, ಡಿಡಿಪಿಯು ಜಗದೀಶ ಜಿ.ಎಚ್​., ಡಿಡಿಪಿಐ ಶ್ರೀಶೈಲ ಬಿರಾದಾರ, ವಾರ್ತಾಧಿಕಾರಿ ಡಾ.ಸುರೇಶ ಜಿ. ಇತರರಿದ್ದರು.