ಕೃಷಿ ಇಲಾಖೆ ವಿವಿಧ ಯೋಜನೆಗಳ ಮಾಹಿತಿ ಪೋಸ್ಟರ್​ನ್ನು ಡಿಸಿ ನಲಿನ್​ ಅತುಲ್​ ಶುಕ್ರವಾರ ಕೊಪ್ಪಳದಲ್ಲಿ ಬಿಡುಗಡೆ ಮಾಡಿದರು. ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್​., ಕೃಷಿ ಅಧಿಕಾರಿಗಳಾದ ಪ್ರಕಾಶ ಚವಡಿ ಇದ್ದರು. 
ಜಿಲ್ಲೆ

ಸಂಯುಕ್ತ ರಸಗೊಬ್ಬರ ಬಳಸಲು ಸಲಹೆ

Kopala - Raveendra V K

ಕೊಪ್ಪಳ: ಮುಂಗಾರು ಬಿತ್ತನೆ ಆರಂಭವಾಗಿದ್ದು, ರೈತರು ಬೆಳೆಗಳಿಗೆ ಡಿಎಪಿ ರಸಗೊಬ್ಬರಕ್ಕೆ ಪರ್ಯಾಯವಾಗಿ ಸಂಯುಕ್ತ ರಸಗೊಬ್ಬರ ಬಳಕೆ ಮಾಡುವಂತೆ ಕೃಷಿ ಅಧಿಕಾರಿಗಳು ಸಲಹೆ ನೀಡಿದ್ದಾರೆ.

ಸಸ್ಯ ಬೆಳವಣಿಗೆಗೆ 17 ಪೋಷಕಾಂಶಗಳು ಅವಶ್ಯ. ಇಂಗಾಲ, ಜಲಜನಕ, ಆಮ್ಲಜನಕ ಸ್ವಾಭಾವಿಕವಾಗಿ ದೊರೆಯಲಿದೆ. ಉಳಿದಂತೆ ಸಾರಜನಕ, ರಂಜಕ, ಪೊಟ್ಯಾಷ್​, ಕಾಲ್ಸಿಯಂ, ಮೆಗ್ನೆಷಿಯಂ, ಗಂಧಕ, ಕಬ್ಬಿಣ, ಜಿಂಕ್​, ಬೋರಾನ್​, ತಾಮ್ರ, ಮ್ಯಾಂಗನೀಸ್​, ಮಾಲಿಬ್ಡಿನಂ, ಕ್ಲೋರಿನ್​ ಮತ್ತು ನಿಕಲ್​ ಬೇಕಾಗಲಿದೆ. ಕೊಟ್ಟಿಗೆ ಗೊಬ್ಬರ, ರಸಗೊಬ್ಬರ ಮೂಲಕ ನೀಡಬೇಕು. ಆದರೆ, ರೈತರು ಸಾರಜನಕ ಮತ್ತು ರಂಜಕ ಇರುವ ಡಿಎಪಿ ಗೊಬ್ಬರ ಮಾತ್ರ ನೀಡುತ್ತಾರೆ. ಪೊಟ್ಯಾಷ್​ ನೀಡುವುದಿಲ್ಲ. ಸಾರಜನಕ : ರಂಜಕ : ಪೊಟ್ಯಾಷ್​ನ್ನು 4:2:1 ಅನುಪಾತದಲ್ಲಿ ಬಳಸಬೇಕು. ಕೇವಲ ಒಂದೇ ಸಂಸ್ಥೆಯ ಅಥವಾ ಒಂದೇ ರಸಗೊಬ್ಬರಕ್ಕೆ ಆದ್ಯತೆ ನೀಡದೆ, ಡಿಎಪಿ ರಸಗೊಬ್ಬರಕ್ಕೆ ಪರ್ಯಾಯವಾಗಿ ಗಂಧಕ ಒದಗಿಸುವ 20:20:0:13 ಹಾಗೂ ಪೊಟ್ಯಾಷ್​ ಒದಗಿಸುವ ಇತರೆ ಸಂಯುಕ್ತ ರಸಗೊಬ್ಬರಗಳಾದ 15:15:15, 10.26.26, 12:32:16, 22:22:11, 14:35:14, 17:17:17, 14:28:14, 19:19:19, 20:10:10 ಇತ್ಯಾದಿ ರಸಗೊಬ್ಬರಗಳನ್ನೂ ಸಹ ಬಳಸುವಂತೆ ತಿಳಿಸಿದ್ದಾರೆ.

ಪೋಸ್ಟರ್​ ಬಿಡುಗಡೆ: ಕೃಷಿ ಇಲಾಖೆಯಿಂದ 2024-25 ನೇ ಸಾಲಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್​ ಬೀಮಾ ಯೋಜನೆಯಡಿ ರೈತರ ಬೆಳೆವಿಮೆ ನೋಂದಾಯಿಸುವ ಬಗ್ಗೆ ಹಾಗೂ ಅಧಿಸೂಚಿತ ಬೆಳೆಗಳು ಹಾಗೂ ಬೆಳೆ ವಿಮೆ ಮೊತ್ತದ ಮಾಹಿತಿ ಇರುವ ಪೋಸ್ಟರ್​ಗಳು ಹಾಗೂ ಡಿಎಪಿ ರಸಗೊಬ್ಬರಕ್ಕೆ ಪರ್ಯಾಯವಾಗಿ ಸಂಯುಕ್ತ ರಸಗೊಬ್ಬರಗಳ ಬಳಕೆ ಕುರಿತ ಪೋಸ್ಟರ್​ನ್ನು ಡಿಸಿ ನಲಿನ್​ ಅತುಲ್​ ಬಿಡುಗಡೆ ಮಾಡಿದರು. ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್​., ಕೃಷಿ ಅಧಿಕಾರಿಗಳಿದ್ದರು.

ಬೆಳೆವಿಮೆಗೆ ನೋಂದಾಯಿಸಲು ಸೂಚನೆ
ಪ್ರಸಕ್ತ ಸಾಲಿನ ಮುಂಗಾರಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್​ ಬೀಮಾ ಯೋಜನೆಗೆ ನೋಂದಾಯಿಸಿಕೊಳ್ಳಲು ರೈತರಿಗೆ ಸೂಚಿಸಲಾಗಿದೆ.
ಹತ್ತಿ (ನೀರಾವರಿ), ಹೆಸರು (ಮಳೆಯಾಶ್ರಿತ) ಬೆಳೆಗೆ ನೋಂದಾಯಿಸಲು ಜುಲೈ 15 ಕೊನೇ ದಿನ. ಇತರ ಬೆಳೆಗಳಿಗೆ ನೋಂದಾಯಿಸಲು ಜುಲೈ 31ಕೊನೆಯ ದಿನ. ಗಂಗಾವತಿ ತಾಲೂಕಿನ ಗ್ರಾಪಂ ಮಟ್ಟದಲ್ಲಿ ಭತ್ತ (ನೀರಾವರಿ), ಕೊಪ್ಪಳ ಕುಷ್ಟಗಿ ತಾಲೂಕಿನಲ್ಲಿ ಮುಸುಕಿನ ಜೋಳ, ಸಜ್ಜೆ (ಮಳೆಯಾಶ್ರಿತ), ಯಲಬುರ್ಗಾ ಹೆಸರು, ಮುಸುಕಿನ ಜೋಳ (ಮಳೆಯಾಶ್ರಿತ) ಬೆಳೆಗಳನ್ನು ಅಧಿಸೂಚಿಸಲಾಗಿದೆ.

ಹೋಬಳಿ ಮಟ್ಟದಲ್ಲಿ ಭತ್ತ, ಜೋಳ, ಮುಸುಕಿನ ಜೋಳ, ಸಜ್ಜೆ, ಸೂರ್ಯಕಾಂತಿ, ತೊಗರಿ, ಶೇಂಗಾ, ಹತ್ತಿ, ಈರುಳ್ಳಿ, ಟೊಮ್ಯಾಟೋ (ನೀರಾವರಿ/ಮಳೆತಯಾಶ್ರಿತ), ಅಲಸಂದಿ, ನವಣೆ, ಹೆಸರು, ಹುರುಳಿ, ಎಳ್ಳು (ಮಳೆಯಾಶ್ರಿತ) ಬೆಳೆಗಳನ್ನು ಅಧಿಸೂಚಿಸಲಾಗಿದೆ. ಪ್ರಸಕ್ತ ಸಾಲಿಗೆ ಟಾಟಾ ಏಐಜಿ ಇನ್ಸೂರೆನ್ಸ್​ ಕೋ.ಲಿಮಿಟೆಡ್​ ವಿಮಾ ಸಂಸ್ಥೆಯನ್ನು ಆಯ್ಕೆ ಮಾಡಲಾಗಿದೆ. ರೈತರು ಹೆಚ್ಚಿನ ಮಾಹಿತಿಗಾಗಿ ಇನ್ಸೂರೆನ್ಸ್​ ಕಂಪನಿಯ ಪ್ರತಿನಿಧಿ/ಹತ್ತಿರದ ರೈತ ಸಂಪರ್ಕ ಕೇಂದ್ರ/ಸಾಮಾನ್ಯ ಸೇವಾ ಕೇಂದ್ರ/ಗ್ರಾಮ್​ ಒನ್​/ ಸಂಬಂಧಪಟ್ಟ ಬ್ಯಾಂಕ್​ ಶಾಖೆ ಸಂಪರ್ಕಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್​. ತಿಳಿಸಿದ್ದಾರೆ.