ಕೊಪ್ಪಳ: ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮದಡಿ ಅಲ್ಪಸಂಖ್ಯಾತರ ಅರ್ಹ ಲಾನುಭವಿಗಳಿಗೆ ಯೋಜನೆ ತಲುಪಿಸುವಂತೆ ಜಿಲ್ಲಾಧಿಕಾರಿ ನಲಿನ್ ಅತುಲ್ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ 2ನೇ ತೆಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಯೋಜನೆಗಳ ಬಗ್ಗೆ ಸಮುದಾಯದ ಜನರಿಗೆ ಮಾಹಿತಿ ನೀಡಿ. ಮುಸ್ಲಿಮ್, ಬೌದ್ಧ, ಜೈನ, ಕ್ರಿಶ್ಚಿಯನ್, ಸಿಖ್ ಮತ್ತು ಪಾರ್ಸಿ ಸಮುದಾಯದ ಅರ್ಹರಿಗೆ ಇಲಾಖೆವಾರು ಯೋಜನೆಗಳ ವಿವರ ನೀಡಿ. ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ರೇಷ್ಮೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸೇರಿ ಇತರ ಇಲಾಖೆಗಳಲ್ಲಿನ ಮಾಹಿತಿ ಪ್ರಚಾರ ಪಡಿಸಿ. ಶೇಕಡವಾರು ಮೀಸಲಾತಿಗೆ ತಕ್ಕಂತೆ ಗುರಿ ಸಾಧಿಸುವಂತೆ ತಾಕೀತು ಮಾಡಿದರು.
ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮದ ಜಿಲ್ಲಾ ಅನುಷ್ಠಾನ ಸಮಿತಿಗೆ ಅಧಿಕಾರೇತರ ಸದಸ್ಯರಾಗಿ ಪ್ರಶಾಂತ ಸುಬ್ಬಣ್ಣ ದೇಸಾಯಿ, ಮೊಹ್ಮದ್ ನಜೀರದ್ದೀನ್ ಮೂಲಿಮನಿ, ಮೇಹಬೂಬ ಪಾಷಾ ಎಂ ಮಾನ್ವಿ, ಸಮೀನಾಬೇಗಂ ಮಹೆಬೂಪಾಷಾ, ಎಂ.ಮದರವಲಿ ಸಾಬ ಆರ್., ಎಂ.ಡಿ ಸಿರಾಜ್ ಎಚ್.ಎಸ್. ನೇಮಕವಾಗಿದ್ದಾರೆ. ನೂತನ ಸದಸ್ಯರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ, ಡಿಎಚ್ಒ ಡಾ.ಟಿ.ಲಿಂಗರಾಜು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಸುರೇಶ ಕೋಕರೆ ಇತರರಿದ್ದರು.