ಕೊಪ್ಪಳ: ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದೆ. ರೈತರಿಗೆ ಅಗತ್ಯ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಪೂರೈಸಿ ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಕೃಷಿ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಕೃಷಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು.
ಗುಣಮಟ್ಟದ ಬಿತ್ತನೆ ಬೀಜ, ರಸಗೊಬ್ಬರ ಪೂರೈಸಿ. ಬೇಡಿಕೆಗೆ ತಕ್ಕಂತೆ ದಾಸ್ತಾನು ಮಾಡಿಕೊಳ್ಳಿ. ಕಳಪೆ ಬೀಜ, ರಸಗೊಬ್ಬರ ಮಾರಾಟದ ಬಗ್ಗೆ ವಿಚಕ್ಷಣದಳ ಅಧಿಕಾರಿಗಳು ನಿಗಾವಹಿಸಿ. ರೈತರಿಂದ ಬರುವ ದೂರುಗಳಿಗೆ ತುರ್ತಾಗಿ ಸ್ಪಂದಿಸಿ, ಸಮಸ್ಯೆ ಪರಿಹರಿಸಿ. ಕಳೆದ ವರ್ಷದ ಬರ ಪರಿಹಾರ ರೈತರ ಖಾತೆಗೆ ಜಮಾ ಮಾಡಲಾಗುತ್ತಿದೆ. ಬಾರದ ರೈತರ ಸಹಾಯಕ್ಕೆ ಸಹಾಯವಾಣಿ ಆರಂಭಿಸಿದ್ದೇವೆ. ಶೇ.85ರಷ್ಟು ರೈತರ ಆಧಾರ್ ಬ್ಯಾಂಕ್ ಖಾತೆಗೆ ಜೋಡಣೆಯಾಗಿದೆ. ಉಳಿದವರ ಸಮಸ್ಯೆಗೆ ಪರಿಹಾರ ಒದಗಿಸಿ. ಪರಿಹಾರ ಮೊತ್ತ ಬ್ಯಾಂಕ್ಗಳು ಸಾಲಕ್ಕೆ ಜಮಾ ಮಾಡುವಂತಿಲ್ಲ. ಮಾಡಿದಲ್ಲಿ ಕ್ರಮವಹಿಸಲಾಗುವುದು ಎಂದು ಎಚ್ಚರಿಸಿದರು.
ತೋಟಗಾರಿಕೆ, ರೇಷ್ಮೇ, ಮೀನುಗಾರಿಕೆ, ಪಶು ಸಂಗೋಪನಾ ಇಲಾಖೆಗಳು ಒಟ್ಟಾಗಿ ಕೃಷಿ ಮೇಳ ಆಯೋಜಿಸಿ. ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ, ಆಧುನಿಕ ಕೃಷಿ ತಂತ್ರಜ್ಞಾನ, ಸರ್ಕಾರದ ಯೋಜನೆಗಳು, ಸಾಲ ಸೌಲಭ್ಯಗಳು, ಮಿಶ್ರ ಹಾಗೂ ಸಾವಯವ ಬೇಸಾಯ, ಋತುಮಾನಾಧಾರಿತ ತೋಟಗಾರಿಕೆ ಬೆಳೆಗಳು, ಮಾರುಕಟ್ಟೆ ಸೌಲಭ್ಯ, ಬೆಳೆಗಳ ಮೌಲ್ಯವರ್ಧನೆ ಮುಂತಾದವುಗಳ ಕುರಿತು ಪ್ರಾತ್ಯಕ್ಷಿಕೆ ಸಹಿತ ಮಾಹಿತಿ ನೀಡಿ. ಸಮಗ್ರ ಬೇಸಾಯ ಬಗ್ಗೆ ತಜ್ಞರು, ಯಶಸ್ವಿ ರೈತರ ಮೂಲಕ ವಿವರ ನೀಡಿ. ಈ ಬಗ್ಗೆ ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್. ಮಾತನಾಡಿ, ಪೂರ್ವ ಮುಂಗಾರು ಉತ್ತಮವಾಗಿದೆ. ಜಿಲ್ಲೆಯಲ್ಲಿ ಮುಂಗಾರಿನಲ್ಲಿ 2,32,573 ಹೆಕ್ಟೇರ್ ಏಕದಳ, 38,086 ಹೆಕ್ಟೇರ್ ದ್ವಿದಳ ಧಾನ್ಯಗಳು, 24,388 ಹೆಕ್ಟೇರ್ ಎಣ್ಣೆ ಕಾಳುಗಳು, 12,953 ಹೆಕ್ಟೇರ್ ವಾಣಿಜ್ಯ ಬೆಳೆಗಳು ಒಟ್ಟು 3,08,000 ಹೆಕ್ಟೇರ್ ಕ್ಷೇತ್ರ ಬಿತ್ತನೆ ಗುರಿ ಇದೆ. ಮೇ ತಿಂಗಳಲ್ಲಿ 16,149 ಟನ್ ರಸಗೊಬ್ಬರ ಬೇಡಿಕೆ ಇದೆ. ಮೇ 20ರ ಅಂತ್ಯಕ್ಕೆ 11,596 ಟನ್ ಸರಬರಾಜಾಗಿದೆ. 55,061 ಟನ್ ದಾಸ್ತಾನಿದೆ. 46,491 ಟನ್ ಉಳಿಕೆ ದಾಸ್ತಾನಿದೆ. ಬಿತ್ತನೆ ಬೀಜ, ರಸಗೊಬ್ಬರ ಕೊರತೆ ಇಲ್ಲವೆಂದು ಮಾಹಿತಿ ನೀಡಿದರು.
ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ, ತೋಟಗಾರಿಕೆ ಉಪ ನಿರ್ದೇಶಕ ಕೃಷ್ಣ ಉಕ್ಕುಂದ, ಉಪ ಕೃಷಿ ನಿರ್ದೇಶಕ ಸಹದೇವ ಯರಗೊಪ್ಪ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ವೀರೇಂದ್ರ ಇತರ ಅಧಿಕಾರಿಗಳಿದ್ದರು.