ಕೊಪ್ಪಳದಲ್ಲಿ ಮಂಗಳವಾರ ಡಿಸಿ ನಲಿನ್​ ಅತುಲ್​ ಅಧ್ಯಕ್ಷತೆಯಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳ ಸಭೆ ನಡೆಯಿತು. ಜಿಪಂ ಸಿಇಒ ರಾಹುಲ್​ ರತ್ನಂ ಪಾಂಡೆಯ, ಎಸ್ಪಿ ಯಶೋದಾ ವಂಟಗೋಡಿ, ಎಡಿಸಿ ಸಾವಿತ್ರಿ ಕಡಿ, ಸಹಾಯಕ ಚುನಾವಣಾಧಿಕಾರಿಗಳಾದ ರೇಷ್ಮಾ ಹಾನಗಲ್​, ಮಲ್ಲಪ್ಪ ತೊದಲಬಾಗಿ, ರುದ್ರೇಶಪ್ಪ ಟಿ.ಎಸ್​. ಇದ್ದರು.  
ಜಿಲ್ಲೆ

ಚುನಾವಣೆ ಯಶಸ್ವಿಯಾಗಿ ನಿಭಾಯಿಸಿ:ಡಿಸಿ ನಲಿನ್​ ಅತುಲ್​ ಸೂಚನೆ

ಕೊಪ್ಪಳ: ಲೋಕಸಭೆ ಚುನಾವಣೆಗೆ ಏ.12ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಆಯಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಹಾಯಕ ಚುನಾವಣಾಧಿಕಾರಿಗಳು ಅಗತ್ಯ ಸಿದ್ಧತೆ ಮಾಡಿಕೊಳ್ಳಿ ಎಂದು ಜಿಲ್ಲಾಧಿಕಾರಿ ನಲಿನ್​ ಅತುಲ್​ ಸೂಚನೆ ನೀಡಿದರು.

ನಗರದ ಜಿಲ್ಲಾಡಳಿತಭವನದ ಕೆಸ್ವಾನ್​ ಸಭಾಂಗಣದಲ್ಲಿ ಮಂಗಳವಾರ ಸಂಜೆ ಸಹಾಯಕ ಚುನಾವಣಾಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು.

ಸಹಾಯಕ ಚುನಾವಣಾಧಿಕಾರಿಗಳು ಸರತಿಯಂತೆ ಚೆಕ್​ಪೋಸ್ಟ್​ ಕಾರ್ಯಾಚರಣೆ, ಎ್​ಎಸ್​ಟಿ, ಎಸ್​ಎಸ್​ಟಿ ತಂಡಗಳ ಕಾರ್ಯಾಚರಣೆ ಬಗ್ಗೆ ಪರಿಶೀಲಿಸಿ. ಅಧಿಕಾರಿಗಳು ಜಾಗರೂಕತೆಯಿಂದ ಕಾರ್ಯನಿರ್ವಹಿಸಿ. ಗಡಿ ಪ್ರದೇಶ ಹಾಗೂ ಹೈವೆಗಳಲ್ಲಿನ ಚೆಕ್​ಪೋಸ್ಟ್​ಗಳಲ್ಲಿ ಅಬಕಾರಿ ಅಧಿಕಾರಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಿ. ಹೋಮ್​ ಗಾರ್ಡ್​ಗಳನ್ನು ಅಗತ್ಯಕ್ಕೆ ತಕ್ಕಂತೆ ನಿಯೋಜಿಸುವಂತೆ ಸಲಹೆ ನೀಡಿದರು.

ಕಳೆದ ಚುನಾವಣೆಯಲ್ಲಿ ಕುಷ್ಟಗಿ ಪಟ್ಟಣದಲ್ಲಿ ಕಡಿಮೆ ಮತದಾನವಾಗಿದೆ. ಅಲ್ಲಿ ಹೆಚ್ಚಿನ ಜಾಗೃತಿ ಕಾರ್ಯಕ್ರಮ ಆಯೋಜಿಸಿ. ಅರ್ಹ ಮತದಾರರು ಮತದಾನದಿಂದ ಹೊರಗುಳಿಯದಂತೆ ನೋಡಿಕೊಳ್ಳಿ. ಮತದಾನದ ಅರಿವು ಮೂಡಿಸಿ. ವೋಟರ್​ ಸ್ಲಿಪ್​ ಸರಿಯಾಗಿ ತಲುಪಿಸಿ. ಬಿಎಲ್​ಒಗಳು ತಮ್ಮ ವ್ಯಾಪ್ತಿಯ ವಾರ್ಡ್​ಗಳಲ್ಲಿನ ಮತದಾರರ ಮಾಹಿತಿ, ವಿಳಾಸ ಅರಿತಿರಬೇಕು. ಸಹಾಯಕ ಚುನಾವಣಾಧಿಕಾರಿಗಳು ಬಿಎಲ್​ಓಗಳೊಂದಿಗೆ ಸಭೆ ಮಾಡಿ, ಸೂಕ್ತ ನಿರ್ದೇಶನ ನೀಡಿ. ಶೇ.100ರಷ್ಟು ಮತದಾರರಿಗೆ ಚೀಟಿ ತಲುಪಬೇಕು ಎಂದರು.

ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡ ಸಿಬ್ಬಂದಿ, ಎಸ್​ಎಸ್​ಟಿ, ಎ್​ಎಟ್​ಟಿ, ಬಿಎಲ್​ಒ ಹಾಗೂ ಇತರ ತಂಡಗಳಿಗೆ ಆಯಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇನ್ನೂ ಹೆಚ್ಚಿನ ತರಬೇತಿ ನೀಡಿ. ತರಬೇತಿ ಸಮಯದಲ್ಲಿ ಸಿಬ್ಬಂದಿ ಗುಣಮಟ್ಟದ ಊಟೋಪಹಾರ ವ್ಯವಸ್ಥೆ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಪಂ ಸಿಇಒ ರಾಹುಲ್​ ರತ್ನಂ ಪಾಂಡೆಯ, ಎಸ್ಪಿ ಯಶೋದಾ ವಂಟಗೋಡಿ, ಎಡಿಸಿ ಸಾವಿತ್ರಿ ಕಡಿ, ಸಹಾಯಕ ಚುನಾವಣಾಧಿಕಾರಿಗಳಾದ ರೇಷ್ಮಾ ಹಾನಗಲ್​, ಮಲ್ಲಪ್ಪ ತೊದಲಬಾಗಿ, ರುದ್ರೇಶಪ್ಪ ಟಿ.ಎಸ್​. ಹಾಗೂ ಅನ್ನಪೂರ್ಣ ಮುದುಕಮ್ಮನವರ, ತಹಸೀಲ್ದಾರ್​ಗಳು, ವಿವಿಧ ಇಲಾಖೆ ಅಧಿಕಾರಿಗಳಿದ್ದರು.