ಜಿಲ್ಲೆ

ಸಮೀಕ್ಷಾ ಕಾರ್ಯ ಅಚ್ಚುಕಟ್ಟಾಗಿ ನಿರ್ವಹಿಸಲು ಡಿಸಿ ಸೂಚನೆ

Kopala - Raveendra V K

ಕೊಪ್ಪಳ: ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ಬಗ್ಗೆ ಕೈಗೊಳ್ಳಲಿರುವ ಸಮೀಕ್ಷಯನ್ನು ಜಿಲ್ಲೆಯಲ್ಲಿ ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಮೀಕ್ಷಾ ಪೂರ್ವ ಸಭೆಯಲ್ಲಿ ಮಾತನಾಡಿದರು.

ಜಿಲ್ಲೆಯಲ್ಲಿ ಸೆ.20ರಿಂದ ಅಕ್ಟೋಬರ್​ 7ವರೆಗೆ ನಡೆಯಲಿದೆ. ಯಾವುದೇ ಸಮಸ್ಯೆಗಳಾಗದಂತೆ ನೋಡಿಕೊಳ್ಳಿ. ತಹಸೀಲ್ದಾರ್​ಗಳು ಗಣತಿದಾರರ ನೇಮಕಾತಿ ಬಗ್ಗೆ ಪರಿಶೀಲಿಸಿ. ವರ್ಗಾವಣೆ, ನಿಯೋಜನೆ ಮೇಲೆ ಇರುವ ಶಿಕ್ಷಕರ ಮಾಹಿತಿ ಪಡೆಯಿರಿ. ಎಲ್ಲವನ್ನೂ ಪರಿಗಣಿಸಿ ಗಣತಿದಾರರ ಸಮೀಾ ಪಟ್ಟಿ ತಯಾರಿಸಿ. ಆರೋಗ್ಯ ಸಮಸ್ಯೆ, ಚಿಕ್ಕಮಕ್ಕಳಿರುವ ಶಿಕ್ಷಕಿಯರು, ವಿಶೇಷ ಚೇತನ ಶಿಕ್ಷಕರನ್ನು ನಿಯೋಜಿಸಬೇಡಿ. 150 ಮನೆಗೆ ಒಬ್ಬ ಗಣತಿದಾರ, 20 ಗಣತಿದಾರರಿಗೆ ಒಬ್ಬ ಮೇಲ್ವಿಚಾರಕರನ್ನು ನೇಮಿಸಿ. ಎಲ್ಲದಕ್ಕೂ ನಾವೇ ಹೇಳುವಂತಾಗಬಾರದು. ನಿಮ್ಮ ಜವಾಬ್ದಾರಿ ಸರಿಯಾಗಿ ನಿರ್ವಹಿಸಿ ಎಂದು ತಾಕೀತು ಮಾಡಿದರು.

ಜಿಲ್ಲೆಯಲ್ಲಿ 3,55,361 ಕುಟುಂಬಗಳನ್ನು ಅಂದಾಜಿಸಲಾಗಿದೆ. 2,370 ಗಣತಿದಾರರು, 130 ಮೇಲ್ವಿಚಾರಕರು ಮತ್ತು 50 ಮಾಸ್ಟರ್​ ಟ್ರೈನರಗಳನ್ನು ನೇಮಿಸಿ. ಪ್ರಾಥಮಿಕ ಶಾಲಾ ಶಿಕ್ಷಕರನ್ನು ನೇಮಿಸಿ. ಆಯಾ ಗ್ರಾಪಂ, ನಗರ ಪ್ರದೇಶದಲ್ಲಿ ಅವಶ್ಯ ಇದ್ದಷ್ಟು ಗಣತಿದಾರರು ಸಿಗದಿದ್ದರೆ ಇತರ ಇಲಾಖೆ ಪ್ರಥಮ, ದ್ವೀತಿಯದರ್ಜೆ ಸಹಾಯಕರನ್ನು ನೇಮಿಸಿ. ತರಬೇತುದಾರರಾಗಿ ಅನುಭವ ಇದ್ದವರಿಗೆ ಆದ್ಯತೆ ನೀಡುವಂತೆ ನಿರ್ದೇಶಿಸಿದರು.

ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಡಿಯುಡಿಸಿ ಪಿಡಿ ಮಂಜುನಾಥ ಗುಂಡೂರ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ನಾಗಮಣಿ ಹೊಸಮನಿ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಬಸವರಾಜ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಸುಧಾಕರ್​ ಮಾನೆ, ಡಿಡಿಪಿಯು ಜಗದೀಶ್​, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಣಾಧಿಕಾರಿ ಅಜ್ಮೀರ ಅಲಿ ಇತರರಿದ್ದರು.