ಜಿಲ್ಲೆ

ಹದಿಹರೆಯದವರನ್ನು ಸದೃಢಗೊಳಿಸಿ:ಡಿಸಿ ನಲಿನ್​ ಅತುಲ್​

DISTRICT KOPPAL DC MEETING AT KOPPAL YOUTHS EMPOWERMENT

ಕೊಪ್ಪಳ:ಹರೆಯದ ಹೆಣ್ಣು ಮಕ್ಕಳಿಗೆ ಶಿಕ್ಷಣದೊಂದಿಗೆ ಕೌಶಲ, ಸಾಮಾಜಿಕವಾಗಿ ಬದುಕುವ ಸಾಮರ್ಥ್ಯ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ತಿಳಿಸಿ ಎಂದು ಜಿಲ್ಲಾಧಿಕಾರಿ ನಲಿನ್​ ಅತುಲ್​ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸ್ಪೂರ್ತಿ ಹದಿಹರೆಯದ ಹೆಣ್ಣು ಮಕ್ಕಳ ಸಬಲೀಕರಣ ಯೋಜನೆಯ ಜಿಲ್ಲಾ ಸಮನ್ವಯ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹರೆಯದವರ ಆಹಾರ ಪದ್ಧತಿ, ಪೌಷ್ಟಿಕಾಂಶ ಸುಧಾರಣೆ, ಮುಟ್ಟಿನ ನೈರ್ಮಲ್ಯ ಅಭ್ಯಾಸಗಳು, ಲೈಂಗಿಕ ಆರೋಗ್ಯ, ಲಿಂಗಾಧಾರಿತ ದೌರ್ಜನ್ಯದ ನಿವಾರಣೆ ಮತ್ತು ಮಾನಸಿಕ ಆರೋಗ್ಯ ಸುಧಾರಿಸಬೇಕಿದೆ. ಔಪಚಾರಿಕ ಶಿಕ್ಷಣದೊಂದಿಗೆ ಬದುಕುವ ಸಾಮರ್ಥ್ಯ, ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವ ಕಲೆ ಕಲಿಸಿ.

ಜ್ಞಾನ ಮತ್ತು ಕೌಶಲಗಳನ್ನು ಕಲಿಸುವ ಮೂಲಕ ಸುರಕ್ಷತೆ, ಆರೋಗ್ಯಕರ ಅಭ್ಯಾಸಗಳು ಮತ್ತು ಲಿಂಗ ಸಮಾನತೆ ಮಾನದಂಡಗಳನ್ನು ಸುಧಾರಿಸುವುದು ಸ್ಪೂರ್ತಿ ಯೋಜನೆ ಉದ್ದೇಶ. ಮಹಿಳಾ ಸಾಧಕರೊಂದಿಗೆ ಕಲಿಕಾ ಭೇಟಿಗೆ ಏರ್ಪಾಡು ಮಾಡಿ. ಆರೋಗ್ಯ ಸಮಸ್ಯೆಗಳು, ಪರಿಹಾರಗಳ ಕುರಿತು ಶಿಬಿರ ಆಯೋಜಿಸಿ. ಪಾಲಕರೊಂದಿಗೆ ಮಕ್ಕಳ ಚರ್ಚಾಕೂಟ ಹಮ್ಮಿಕೊಳ್ಳಿ ಎಂದು ಸಲಹೆ ನೀಡಿದರು.

ಜಿಪಂ ಸಿಇಒ ರಾಹುಲ್​ ರತ್ನಂ ಪಾಂಡೆಯ ಮಾತನಾಡಿ, ಶಿಕ್ಷಕರು ಮಕ್ಕಳಿಗೆ ಲಿಂಗತ್ವದ ಬಗ್ಗೆ ವಿವರವಾಗಿ ಕಾರ್ಯಕ್ರಮಗಳ ಮೂಲಕ ಮಾಹಿತಿ ನೀಡಬೇಕು. ಕೌಶಲಗಳ ಬಗ್ಗೆ ತಿಳಿಸಬೇಕು. ಶಾಲೆಗಳಲ್ಲಿ ಗಂಡು-ಹೆಣ್ಣು ಎಂಬ ಬೇಧ ಇರಬಾರದು. ಬಾಲ್ಯ ವಿವಾಹ ತಡೆ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಿ ಎಂದರು.

ಎಸ್ಪಿ ಯಶೋದಾ ವಂಟಗೋಡಿ ಮಾತನಾಡಿ, ಶಾಲಾ-ಕಾಲೇಜುಗಳಲ್ಲಿ ಲಿಂಗ, ಲಿಂಗತ್ವದ ಬಗ್ಗೆ ಮೊದಲು ಶಿಕ್ಷಕಿಯರಿಗೆ ತರಬೇತಿ ಕೊಡಿ. ಅಪ್ರಾಪ್ತ ವಯಸ್ಸಿನಲ್ಲಿ ವಿವಾಹವಾಗದಂತೆ ಅಧಿಕಾರಿಗಳು ಕ್ರಮವಹಿಸಿ. ಶಿಕ್ಷಕರಿಂದ ಕಿರುಕುಳ ಮತ್ತು ಹುಡುಗರು ಚುಡಾಯಿಸುವುದನ್ನು ತಡೆಗಟ್ಟಬೇಕು. ಸರ್ಕಾರಿ ಯೋಜನೆಗಳ ಬಗ್ಗೆ ಹೆಣ್ಣುಮಕ್ಕಳಿಗೆ ತಿಳಿಸಬೇಕು ಎಂದು ಹೇಳಿದರು.

ಕೆಎಚ್​ಪಿಟಿ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಮಂಜುನಾಥ ಮಾತನಾಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ತಿಪ್ಪಣ್ಣ ಸಿರಸಗಿ, ಆರ್​ಸಿಎಚ್​ ಅಧಿಕಾರಿ ಡಾ.ಪ್ರಕಾಶ ವಿ., ಡಿಡಿಪಿಐ ಶ್ರೀಶೈಲ ಬಿರಾದಾರ, ಜಿಲ್ಲಾ ಕೌಶಲ ಅಭಿವೃದ್ಧಿ ಅಧಿಕಾರಿ ಪ್ರಾಣೇಶ, ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿ ಶಿವಾನಂದ ವಿ.ಪಿ. ಇತರರಿದ್ದರು.