ಜಿಲ್ಲೆ

ಸಕ್ಕರೆ ಕಾರ್ಖಾನೆಗೆ ಎನ್​ಒಸಿ ನೀಡುವುದಿಲ್ಲ, ಗೊಂಡಬಾಳ ಗ್ರಾಪಂ ಸದಸ್ಯರ ನಿರ್ಧಾರ

Kopala - Raveendra V K

ಕೊಪ್ಪಳ: ಮುದ್ದಾಬಳ್ಳಿ&ಗೊಂಡಬಾಳ ಗ್ರಾಮಕ್ಕೆ ಹೊಂದಿಕೊಂಡು ಸಕ್ಕರೆ ಕಾರ್ಖಾನೆ ನಿರ್ಮಿಸಲು ಅನುಮತಿ ನಿರಾಕರಿಸಿ ಗ್ರಾಪಂ ಸಭೆಯಲ್ಲಿ ರ್ನಿಣಯ ಕೈಗೊಳ್ಳುವುದಾಗಿ ಗ್ರಾಮಸ್ಥರು ಶುಕ್ರವಾರ ನಿರ್ಧರಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶಾಸಕ ರಾವೇಂದ್ರ ಹಿಟ್ನಾಳ ಹಾಗೂ ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಗ್ರಾಪಂ ಸದಸ್ಯರು ಹಾಗೂ ಗ್ರಾಮದ ಪ್ರಮುಖರು ನಿರ್ಧಾರ ಪ್ರಕಟಿಸಿದರು.

ಶಾಸಕ ರಾವೇಂದ್ರ ಹಿಟ್ನಾಳ ಮಾತನಾಡಿ, ಗ್ರಾಮಕ್ಕೆ ಹೊಂದಿಕೊಂಡು ಸಕ್ಕರೆ ಕಾರ್ಖಾನೆ ಬೇಡವೆಂಬುದು ನಿಮ್ಮ ಬೇಡಿಕೆ. ಕಂಪನಿ ವಿರುದ್ಧ ಅಲ್ಲ. ಜನನಿಬಿಡ ಪ್ರದೇಶ ಬಿಟ್ಟು ಬೇರೆಡೆ ಸ್ಥಾಪಿಸಿದರೆ ನಮ್ಮದೂ ಅಭ್ಯಂತರವಿಲ್ಲ. ಇದೇ ವಿಷಯವಾಗಿ ಆ.25ರಂದು ಸಭೆ ನಡೆಸಿ ಠರಾವು ಮಾಡಿ. ಅದನ್ನು ತಾಪಂ ಮೂಲಕ ಕಳಿಸಿಕೊಡಿ. ಅದರ ಉಲ್ಲೇಖ ಹಾಕಿ ಜಿಲ್ಲಾಧಿಕಾರಿಗಳು ಹಾಗೂ ನಾನು ಸರ್ಕಾರದ ಗಮನ ಸೆಳೆಯುತ್ತೇವೆ. ಜನರನ್ನು ಬಿಟ್ಟು ಜನಪ್ರತಿನಿಧಿಗಳು ಇರಲು ಆಗದು. ಒಳಿತಾಗುವುದನ್ನೇ ಮಾಡೋಣ. ಕಾರ್ಖಾನೆ ಆರಂಭಕ್ಕೆ ನಿರಪೇಕ್ಷಣಾ ಪತ್ರ ನೀಡಲು ಸಭೆಯಲ್ಲಿ ನಿರ್ಧರಿಸಿದ್ದು ಸರಿಯಲ್ಲ ಎಂದರು.

ಗ್ರಾಪಂ ಸದಸ್ಯರು ಮಾತನಾಡಿ, ಪಿಡಿಒ ಅವರು ಮೇಲಿನಿಂದ ಒತ್ತಡವಿದೆ ಎಂದು ಹೇಳಿದರು. ನಮಗೆ ಯಾರೂ ಒತ್ತಡ ಹಾಕಿಲ್ಲ. ಪರಿಸರ ಇಲಾಖೆ ನಡೆಸಿದ ಅಹವಾಲು ಸಭೆಯಲ್ಲಿ ಮೊದಲು ಬಹುತೇಕರು ಬೇಡವೆಂದರು. ಎರಡನೇ ಸಭೆಯಲ್ಲಿ ಬಹುತೇಕರು ಬೇಕು ಎಂದಿದ್ದರು. ಹೀಗಾಗಿ ನಾವೆಲ್ಲ ಸೇರಿ ಎನ್​ಒಸಿ ನೀಡಲು ಒಪ್ಪಿಗೆ ಸೂಚಿಸಿದ್ದೇವೆ. ಆದರೆ, ಈವರೆಗೂ ನೀಡಿಲ್ಲ. ಜನರಿಗೆ ಬೇಡವಾದರೆ ನಮಗೂ ಬೇಡ. ಸೋಮವಾರ ನಡೆವ ಸಭೆಯಲ್ಲಿ ಗ್ರಾಮಕ್ಕೆ ಹೊಂದಿಕೊಂಡು ಕಾರ್ಖಾನೆ ಆರಂಭಕ್ಕೆ ಅವಕಾಶ ನೀಡುವುದಿಲ್ಲವೆಂದು ಠರಾವು ಪಾಸ್​ ಮಾಡುತ್ತೇವೆಂದು ಭರವಸೆ ನೀಡಿದರು.

ಗ್ರಾಮದ ಪ್ರಮುಖರು ಮಾತನಾಡಿ, ಗ್ರಾಮ ಸಭೆ ಕರೆದು ಜನರಿಂದ ಅಹವಾಲು ಸ್ವೀಕರಿಸಿ. ನಮಗೆ ಕಾರ್ಖಾನೆ ಬೇಡ. ಇದರಿಂದ ಎರಡೂ ಗ್ರಾಮಗಳಿಗೆ ಸಾಕಷ್ಟು ಸಮಸ್ಯೆ ಆಗಲಿದೆ. ಜಿಲ್ಲಾಡಳಿತ, ಶಾಸಕರು ನಮ್ಮ ಮನವಿ ಆಲಿಸಬೇಕೆಂದು ಮನವಿ ಮಾಡಿದರು.

ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ, ಜಿಪಂ ಮಾಜಿ ಅಧ್ಯಕ್ಷ ಎಸ್​.ಬಿ.ನಾಗರಳ್ಳಿ, ಜಿಪಂ ಮಾಜಿ ಸದಸ್ಯ ಗೂಳಪ್ಪ ಹಲಗೇರಿ, ಶರಣಪ್ಪ ಸಜ್ಜನ್​, ಗವಿಸಿದ್ದನಗೌಡ ಪಾಟೀಲ್​, ಶರಣಪ್ಪ ಇತರರಿದ್ದರು.