ಕೊಪ್ಪಳ; ಜಿಲ್ಲಾದ್ಯಂತ ಬುಧವಾರ ಆಯುಧ ಪೂಜೆ, ಗುರುವಾರ ವಿಜಯದಶಮಿ ಆಚರಣೆ ಮೂಲಕ ನವರಾತ್ರಿಗೆ ವೈಭವದ ತೆರೆ ಬಿದ್ದಿತು. ನಗರ ಸೇರಿ ಗ್ರಾಮೀಣ ಭಾಗಗಳಲ್ಲಿ ಪ್ರತಿಷ್ಠಾಪನೆಗೊಂಡಿದ್ದ ದುರ್ಗಾದೇವಿ ಮೂರ್ತಿ ವಿಸರ್ಜನಾ ಕಾರ್ಯಕ್ರಮವೂ ವಿಜೃಂಭಣೆಯಿಂದ ನೆರವೇರಿದವು.
ಶರನ್ನವರಾತ್ರಿ ಅಂಗವಾಗಿ 9 ದಿನಗಳ ಕಾಲ ನಿತ್ಯವೂ ಹತ್ತಾರು ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಬೆಳಗ್ಗೆಯಿಂದ ತಡರಾತ್ರಿವರೆಗೆ ನಡೆದ ಸಾಂಸತಿಕ ಕಾರ್ಯಕ್ರಮಗಳು ಜನರ ಮನಸೂರೆಗೊಂಡವು. ಕೊಪ್ಪಳದ ಬಸವೇಶ್ವರ ದೇವಸ್ಥಾನ ಸೇವಾ ಸಮಿತಿ, ಗಡಿಯಾರ ಕಂಬ ವೃತ್ತ ದುರ್ಗಾದೇವಿ, ಲೋಕಾಯುಕ್ತ ಕಚೇರಿ ಬಳಿಯ ದುರ್ಗಾದೇವಿ, ಭಾಗ್ಯನಗರದ ಅಂಬೇಡ್ಕರ್ ವೃತ್ತದ ದುರ್ಗಾದೇವಿ ನವರಾತ್ರಿ ಉತ್ಸವ ಸಮಿತಿ, ಅಂಬಾ ಭವಾನಿ ದೇವಸ್ಥಾನ ಸೇರಿ ವಿವಿಧೆಡೆ ಧಾರ್ಮಿಕ ಕಾರ್ಯಕ್ರಮಗಳು ಮೆರಗು ಹೆಚ್ಚಿಸಿದವು.
ಬುಧವಾರ ಆಯುಧ ಪೂಜೆ ಅಂಗವಾಗಿ ಎಲ್ಲೆಡೆ ಹೊಸ ವಾಹನಗಳ ಖರೀದಿ, ಪೂಜೆ ಕಂಡುಬಂತು. ಕೊನೇ ದಿನವಾದ ಗುರುವಾರ ಮಧ್ಯಾಹ್ನ ವೇಳೆಗೆ ಮೂರ್ತಿ ವಿಸರ್ಜನೆ ಮೆರವಣಿಗೆ ಆರಂಭವಾದವು. ಡಿಜೆ ಸದ್ದಿಗೆ ಮಹಿಳೆಯರು, ಮಕ್ಕಳು ಹೆಜ್ಜೆ ಹಾಕಿದರು. ಕೋಲು ಹಿಡಿದ ನಾರಿಯರು ಸಾಂಸತಿಕ ನೃತ್ಯ ಮಾಡಿ ಗಮನ ಸೆಳೆದರು. ಮಕ್ಕಳು ಹೊಸ ಬಟ್ಟೆ ತೊಟ್ಟು ಮಿಂಚಿದರು. ಗಣ್ಯರು, ಜನಪ್ರತಿನಿಧಿಗಳು ವಿವಿಧ ಮೂರ್ತಿ ವಿಸರ್ಜನಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ದೇವಿ ಆಶೀರ್ವಾದ ಪಡೆದರು. ಮಕ್ಕಳ ನೃತ್ಯ, ದೇವಿ ಮಹಿಮೆ ಸಾರುವ ಹಾಡುಗಳು ಪ್ರದರ್ಶನಗೊಂಡವು. ಟವಿಸರ್ಜನೆ ಬಳಿಕ ಸಂಜೆಯಿಂದ ರಾತ್ರಿವರೆಗೆ ಸಾರ್ವಜನಿಕರು ಪರಸ್ಪರ ಬನ್ನಿ ಮುಡಿದು ವಿಜಯ ದಶಮಿ ಶುಭಾಶಯ ಕೋರಿದರು.