ಜಿಲ್ಲೆ

ನಗರಸಭೆಯಲ್ಲಿ ವೇತನಕ್ಕೂ ದುಡ್ಡಿಲ್ಲ ! 30 ಕೆಲಸಗಾರರ ವಜಾ

Kopala - Raveendra V K

ಕೊಪ್ಪಳ: ಲೋಕಾಯುಕ್ತ ತನಿಖೆ ಎದುರಿಸುತ್ತಿರುವ ನಗರಸಭೆಯಲ್ಲಿನ ಅಕ್ರಮಗಳು ಒಂದೊಂದಾಗಿ ಹೊರಬರುತ್ತಿವೆ. ಟೆಂಡರ್​ ನಡೆಸದೆಯೇ 30 ಸ್ವಚ್ಛತಾ ಸಿಬ್ಬಂದಿ ನೇಮಿಸಿಕೊಂಡಿದ್ದು, ಇದೀಗ ವೇತನ ನೀಡಲು ದುಡ್ಡಿಲ್ಲದೇ ಕೆಲಸದಿಂದ ತೆಗೆದಿರುವುದು ಬೆಳಕಿಗೆ ಬಂದಿದೆ.

ಕೆಲವೇ ದಿನಗಳಲ್ಲಿ ನರಗಸಭೆ ಈ ಅವಧಿ ಮುಕ್ತಾಯಗೊಳ್ಳಲಿದೆ. ಈ ಹಂತದಲ್ಲಿ ಕೇವಲ ಒಂದು ವರ್ಷದ ಕಾಮಗಾರಿಗಳಿಗೆ ಸಂಬಂಧಿಸಿದಂತೆ ನಡೆದ ಅಕ್ರಮ ಕುರಿತು ಲೋಕಾಯುಕ್ತ ತನಿಖೆ ನಡೆಯುತ್ತಿದೆ. 12 ಕೋಟಿ ರೂ.ಗೆ ಸಂಬಂಧಿಸಿದ 336 ಕಾಮಗಾರಿಗಳಲ್ಲಿ ಅಕ್ರಮದ ಆರೋಪ ಕೇಳಿ ಬಂದಿದೆ. ಇದಲ್ಲದೇ ಪೌರ ಕಾರ್ಮಿಕರಲ್ಲದೇ ಲೋಡಿಂಗ್​ ಹಾಗೂ ಇತರ ಕೆಲಗಳಿಗೆಂದು 30ಕ್ಕೂ ಹೆಚ್ಚು ಕೆಲಸಗಾರರನ್ನು ಕಳೆದೆರಡು ವರ್ಷಗಳ ಹಿಂದೆ ನೇಮಿಸಿಕೊಳ್ಳಲಾಗಿದೆ. ಗವಿಸಿದ್ದೇಶ್ವರ ಜಾತ್ರೆ ಅವಧಿಯಲ್ಲಿ ಕೆಲಸಕ್ಕೆ ಕರೆದುಕೊಂಡಿದ್ದು, ಬಳಿಕ ಇಷ್ಟು ದಿನ ಮುಂದುವರಿಸಿದ್ದಾರೆ.

ಅಗತ್ಯ ಇದ್ದಲ್ಲಿ ನಿಯಮಾನುಸಾರ ಟೆಂಡರ್​ ಮಾಡಿ ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಬೇಕಿತ್ತು. ಆದರೆ, ಅದ್ಯಾವುದನ್ನೂ ಮಾಡಿಲ್ಲ ಎನ್ನಲಾಗಿದೆ. ಎರಡು ವರ್ಷ ಮುಂದುವರೆಸಿಕೊಂಡು ಬಂದಿದ್ದಾರೆ. ಒಬ್ಬರಿಗೆ ಮಾಸಿಕ 15 ಸಾವಿರ ರೂ. ವೇತನ ಪಾವತಿಸಲಾಗಿದೆ. ನಿಯಮಾನುಸಾರ ಇಲ್ಲದಿದ್ದರಿಂದ ಯಾವ ಖಾತೆಯಿಂದ, ಹೇಗೆ ವೇತನ ಮಾಡಿದ್ದಾರೆ, ಯಾವ ಏಜೆನ್ಸಿ ಹೆಸರಿನಲ್ಲಿ ಮಾಡಿದ್ದಾರೆಂಬುದು ಗೊತ್ತಾಗಬೇಕಿದೆ. ಲೋಕಾಯುಕ್ತ ದಾಳಿ ನಡೆಯುತ್ತಲೇ 30 ಕೆಲಸಗಾರರನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಮೂರು ತಿಂಗಳಿನಿಂದ ವೇತನವನ್ನೂ ನೀಡಿಲ್ಲ. ಏಕಾಏಕಿ ಕೆಲಸದಿಂದ ತೆಗೆದಿದ್ದು ಅವರೆಲ್ಲ ಅತಂತ್ರರಾಗಿದ್ದಾರೆ. ನಗರಸಭೆ ಬೊಕ್ಕಸ ಬರಿದಾಗಿದ್ದು ಸಾದಿಲ್ವಾರು ವೆಚ್ಚಗಳಿಗೂ ಹಣ ಜೋಡಿಸಲು ಹೆಣಗಾಡಬೇಕಾದ ಸ್ಥಿತಿ ನಿರ್ಮಾನವಾಗಿದೆ ಎಂಬ ಆರೋಪ ಕೇಳಿ ಬರುತ್ತಿವೆ.

ಬಿಲ್​ ಮಾಡಲು ಒತ್ತಡ ?

ಒಂದೆಡೆ ಅಕ್ರಮದ ಗೂಡಾಗಿರುವ ನಗರಸಭೆಯಲ್ಲಿ ಲೋಕಾಯುಕ್ತ ವಿಚಾರಣೆ ಮುಂದುವರೆದರೆ, ಮತ್ತೊಂದೆಡೆ ಬಾಕಿ ಬಿಲ್​ ಮಾಡಿಸಿಕೊಳ್ಳಲು ಗುತ್ತಿಗೆದಾರರು ಹೆಣಗಾಡುತ್ತಿದ್ದಾರೆ. ಕೆಲ ದಿನಗಳಲ್ಲಿ ನಗರಸಭೆ ಅವಧಿ ಮುಗಿಯಲಿದ್ದು ಚುನಾವಣೆ ಘೋಷಣೆಯಾಗಲಿದೆ. ಅಷ್ಟೊರಳಗೆ ಬಿಲ್​ ಮಾಡುವಂತೆ ಗುತ್ತಿಗೆದಾರರೊಬ್ಬರು ಅಕೌಂಟೆಂಟ್​ ಸೇರಿ ಇನ್ನಿತರ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆನ್ನಲಾಗಿದೆ. ಇದೇ ವಿಷಯವಾಗಿ ಇತ್ತೀಚೆಗೆ ನೌಕರರೊಬ್ಬರ ಮೇಲೆ ಗುತ್ತಿಗೆದಾರನೊಬ್ಬ ಹಲ್ಲೆಗೆ ಯತ್ನಿಸಿದ್ದಾನೆಂಬ ಗುಸುಗುಸು ಕೇಳಿಬರುತ್ತಿದೆ.