ಕೊಪ್ಪಳ: ಮಕ್ಕಳು ದೇಶದ ಪ್ರಜೆಗಳು. ಅವರ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿ ಸಮಾಜ ರೂಪಿಸಬೇಕು. ಬಾಲ ಕಾರ್ಮಿಕ ಪದ್ಧತಿ ಮಕ್ಕಳ ಭವಿಷ್ಯ ಕಸಿಯಲಿದೆ. ಈ ಬಗ್ಗೆ ಎಲ್ಲರೂ ಜಾಗೃತರಾಗಬೇಕೆಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಹೇಳಿದರು.
ನಗರದ ಜಿಪಂ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಕಾರ್ಮಿಕ ಇಲಾಖೆಯಿಂದ ಗುರುವಾರ ಹಮ್ಮಿಕೊಂಡಿದ್ದ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನ ಕಾನೂನು ಅರಿವು&ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಕ್ಕಳಿಗೆ ಶಿಕ್ಷಣ ನೀಡಬೇಲು. ಕೃಷಿ, ಹೋಟೆಲ್, ಗ್ಯಾರೇಜ್, ಆರೋಗ್ಯ ಕ್ಷೇತ್ರದಲ್ಲಿ ಬಾಲ ಕಾರ್ಮಿಕರು ಕಂಡುಬರುತ್ತಾರೆ. ಬಾಲ ಕಾರ್ಮಿಕರನ್ನು ದುಡಿಸಿಕೊಳ್ಳುವುದು ಅಪರಾಧ. ಪಾಲಕರು ಮಕ್ಕಳನ್ನು ಶಾಲೆಗೆ ಕಳಿಸಬೇಕು. ದುಡಿಯಲು ಅಲ್ಲ. ಅವರ ಬಾಲ್ಯ ಕಸಿದುಕೊಳ್ಳಲಿದೆ. ದೇಶದ ಭವಿಷ್ಯವಾದ ಮಕ್ಕಳ ವ್ಯಕ್ತಿತ್ವ ಅಭಿವೃದ್ಧಿಗೆ ಪೂರಕವಾಗಿ ಸಮಾಜ ರೂಪಿಸಬೇಕು. ಜಿಲ್ಲೆಯಲ್ಲಿ ಕಳೆದ ಮೂರು ವರ್ಷದಲ್ಲಿ 62 ಬಾಲ ಕಾರ್ಮಿಕ ಪ್ರಕರಣಗಳು ಪತ್ತೆಯಾಗಿವೆ. 13 ಪ್ರಕರಣಗಳಲ್ಲಿ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ ಎಂದರು.
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸದಸ್ಯ ಶೇಖರಗೌಡ ರಾಮತ್ನಾಳ ಮಾತನಾಡಿ, ಉಚಿತ ಕಡ್ಡಾಯ ಶಿಕ್ಷಣ ಸೌಲಭ್ಯಗಳಿದ್ದರೂ ಜಿಲ್ಲೆಯಲ್ಲಿ ಬಾಲಕಾರ್ಮಿಕರು ಮತ್ತು ಬಾಲ್ಯ ವಿವಾಹ ಪ್ರಕರಣಗಳು ಕಂಡು ಬರುತ್ತಿರುವುದು ವಿಷಾದನೀಯ. ಬಾಲ ಕಾರ್ಮಿಕರ ಪದ್ಧತಿ ನಿಮೂರ್ಲನೆ ಕೇವಲ ಒಂದು ಇಲಾಖೆ ಕೆಲಸವಲ್ಲ. ಗ್ರಾಪಂ ಮಟ್ಟದಿಂದ ಜಿಲ್ಲಾ ಮಟ್ಟದ ಅಧಿಕಾರಿಗಳವರೆಗೆ ಎಲ್ಲರೂ ಸಹಕರಿಸಬೇಕು. ಶಾಲೆಯಲ್ಲಿ ಮಕ್ಕಳು ಒಂದು ವಾರ ಬರದಿದ್ದರೆ ಶಿಕ್ಷಕರು ಗಂಭೀರವಾಗಿ ಪರಿಗಣಿಸಬೇಕು ಎಂದು ತಿಳಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ಮಹಾಂತೇಶ್ ಎಸ್. ದರಗದ ಮಾತನಾಡಿ, ದಿನಾಚರಣೆ ಉದ್ದೇಶ ಮಕ್ಕಳು ಯಾರೂ ಬಾಲಕಾರ್ಮಿಕರಾಗಿ ಉಳಿಯಬಾರದು ಎಂಬುದು. ಮಕ್ಕಳು ತಮ್ಮ ಹಕ್ಕುಗಳನ್ನು ಅನುಭವಿಸಬೇಕು. ಬಾಲ್ಯದಲ್ಲಿ ದುಡಿಮೆಗೆ ಹಚ್ಚಬಾರದು. ಬಡತನ ಸೇರಿ ಇತರ ಕಾರಣಗಳಿಗೆ ಮಕ್ಕಳು ಬಾಲ ಕಾರ್ಮಿಕ ಪದ್ಧತಿಗೆ ಒಳಗಾಗುತ್ತಾರೆ. ನಾವೆಲ್ಲ ಸೇರಿ ಅದನ್ನು ತಡೆಯಬೇಕು. ಜನರಿಗೆ ಮೂಲ ಸೌಕರ್ಯ ಕಲ್ಪಿಸಬೇಕು ಎಂದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ಸುಧಾ ಗರಗ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಬಾಲ ಕಾರ್ಮಿಕ ಮಕ್ಕಳಿಗೆ ಬಾಂಡ್ಗಳನ್ನು ವಿತರಿಸಲಾಯಿತು.
ಡಿಡಿಪಿಐ ಶ್ರೀಶೈಲ ಬಿರಾದಾರ, ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ ಡಿಡಿ ಪರಶುರಾಮ್ ವೈ. ಶೆಟ್ಟೆಪ್ಪನವರ್, ಮಕ್ಕಳ ರಕ್ಷಣಾ ಯೋಜನೆ- ಯುನಿಸೆಫ್ ಕೊಪ್ಪಳ ಸಂಯೋಜಕ ಹರೀಶ್ ಜೋಗಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತಸ್ವಾಮಿ ಪೂಜಾರ, ವಾರ್ತಾಧಿಕಾರಿ ಡಾ. ಸುರೇಶ್ ಜಿ., ಕಾರ್ಮಿಕ ನಿರೀಕ್ಷಕಿ ಮಂಜುಳಾ, ಬಾಲ ಕಾರ್ಮಿಕ ಯೋಜನಾ ನಿರ್ದೇಶಕ ಬಸವರಾಜ ಹಿರೇಗೌಡ್ರ ಇತರರಿದ್ದರು.