ಛಲವಾದಿ ನಾರಾಯಣಸ್ವಾಮಿ 
ಜಿಲ್ಲೆ

ಕಾಂಗ್ರೆಸ್​ ದಲಿತರ ಪಾಲಿಗೆ ಸುಡುವ ಮನೆ, ಪರಿಷತ್​ ವಿಪಕ್ಷ ನಾಯಕ ನಾರಾಯಣ ಸ್ವಾಮಿ ಟೀಕೆ

ಕೊಪ್ಪಳ: ದೇಶದಲ್ಲಿ ದಲಿತ, ಅಂಬೇಡ್ಕರ್​, ಸಂವಿಧಾನ ವಿರೋಧಿ ಕಾಂಗ್ರೆಸ್​. ಆ ಪಕ್ಷ ದಲಿತರ ಪಾಲಿಗೆ ಸುಡುವ ಮನೆ ಇದ್ದಂತೆ ಎಂದು ಅಂಬೇಡ್ಕರ್​ ಅವರೇ ಹೇಳಿದ್ದರು ಎಂದು ವಿಧಾನ ಪರಿಷತ್​ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮೀ ಟೀಕಿಸಿದರು.

ನಗರದ ಕೆ.ಎಸ್​.ಆಸ್ಪತ್ರೆಯಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ಅಂದು ನಾವು ಅನಕ್ಷರಸ್ಥರಾಗಿದ್ದೆವು. ಕಾಂಗ್ರೆಸ್​ ಮಾಡಿದ್ದೆಲ್ಲ ನಡೆಯಿತು. ಇಂದು ನಾವು ಸಾಕ್ಷರಾಗಿದ್ದೇವೆ. ಅವರ ಅಂಗಡಿ ಬಂದ್​ ಆಗಲಿದೆ. ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ. ಎಸ್ಟಿಗಳ ನೂರಾರು ಕೋಟಿ ರೂ. ಅನುದಾನ ತಿಂದ ಇವರು ಯಾವ ಮುಖ ಇಟ್ಟುಕೊಂಡು ಸಂಡೂರಿನಲ್ಲಿ ಮತ ಕೇಳುತ್ತಾರೆ ? ಮಾನ, ಮರ್ಯಾದೆ ಇದ್ದಿದ್ದರೆ ಬರುತ್ತಿರಲಿಲ್ಲ. ಜನ ಈ ಬಗ್ಗೆ ಪ್ರಶ್ನಿಸಿದರೆ ಏನೆಂದು ಉತ್ತರಿಸುತ್ತಾರೆ. ಆ ಇಲಾಖೆ ಮಂತ್ರಿಯೇ ಜೈಲಿಗೆ ಹೋಗಿ ಬಂದರು. ಎಸ್ಸಿ, ಎಸ್ಟಿ ಸಮುದಾಯದವರನ್ನೇ ಬಳಸಿ ಸಿಎಂ ದುಡ್ಡು ಹೊಡೆಯುತ್ತಾರೆ. ಮುಡಾದಲ್ಲಿ ಬಿಜೆಪಿಗೆ ಜಗ್ಗಲ್ಲ ಅಂದರು. ರಾತ್ರೋ ರಾತ್ರಿ ಸೈಟ್​ ವಾಪಸ್​ ನೀಡಿದರು ಎಂದು ಕುಟುಕಿದರು.

ಲೋಕಾಯುಕ್ತರು ಎಷ್ಟು ಅವಧಿ ವಿಚಾರಣೆ ನಡೆಸುತ್ತಾರೆ ಎಂದು ಇವರಿಗೆ ಹೇಗೆ ಗೊತ್ತು ? ಇವರ ಪಟಾಲಂ ನೇಮಿಸಿದ ಅಧಿಕಾರಿಗಳು ವಿಚಾರಣೆ ಮಾಡುತ್ತಾರಾ ? ಕ್ಲೀನ್​ ಚಿಟ್​ ಪಡೆಯಲು ನಡೆಸಿದ ಷಡ್ಯಂತ್ರ ಇದು. ವಾಲ್ಮೀಕಿ ಹಗರಣದಲ್ಲಿ ಆರೋಪ ಬಂದ ತಕ್ಷಣ ನಾಗೇಂದ್ರ ರಾಜೀನಾಮೆ ಪಡೆದರು. ತಮ್ಮ ವಿರುದ್ಧ ಆರೋಪ ಬಂದಾಗ ಯಾಕೆ ರಾಜೀನಾಮೆ ನೀಡಲಿಲ್ಲ ? ದಲಿತರಿಗೊಂದು ನ್ಯಾಯ, ಇವರಿಗೊಂದು ನ್ಯಾಯವಾ ? ತಕ್ಷಣ ರಾಜೀನಾಮೆ ನೀಡಲಿ ಎಂದು ಸಿಎಂಗೆ ಆಗ್ರಹಿಸಿದರು.

ಸಚಿವ ಜಮೀರ್​ ಖಾನ್​ ಒಳ್ಳೆ ಕೆಲಸ ಮಾಡಿದ್ದಾರೆ. ಈಗ ಬೆಳಕಿಗೆ ಬರದಿದ್ದರೆ ಮುಂದೆ ನಾವೆಲ್ಲ ಸಾಕಷ್ಟು ಸಮಸ್ಯೆ ಎದುರಿಸಬೇಕಿತ್ತು. ಜಂಟಿ ಸದನ ಸಮಿತಿಗೆ ವಕ್ಫ ಸಮಸ್ಯೆ ಬಗ್ಗೆ ಹಲವು ವಿಷಯ ಗಮನಕ್ಕೆ ತಂದಿರುವೆ. ನೂರಾರು ವರ್ಷಗಳಿಂದ ಉಳುಮೆ ಮಾಡುವ ಜಮೀನುಗಳು ವಕ್ಫ ಆಸ್ತಿ ಎಂದಿವೆ. ಆವಾಗ ವಕ್ಫ ಬೋರ್ಡ್​ ಇತ್ತಾ ? ಏಕೀಕರಣ ಸಮಯದಲ್ಲಿ ಎಲ್ಲ ರಾಜರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಯಿತು. ವಕ್ಫ ಆಸ್ತಿ ಯಾಕೆ ಹಾಕಿಕೊಳ್ಳಲಿಲ್ಲ. ಇದೊಂದು ರಿಯಲ್​ ಎಸ್ಟೇಟ್​ ದಂಧೆ. ವಕ್ಫ ಬೋರ್ಡ್​ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.