ಜಿಲ್ಲೆ

ಷಾ ಹೇಳಿಕೆ ಖಂಡಿಸಿ ಬಂದ್​ ಜ.6ಕ್ಕೆ

Kopala - Raveendra V K

ಕೊಪ್ಪಳ: ಕೇಂದ್ರ ಗೃಹ ಸಚಿವ ಅಮಿತ್​ ಷಾ ಅಂಬೇಡ್ಕರ್​ ಬಗ್ಗೆ ಆಡಿದ ಅಪಮಾನಕರ ಮಾತುಗಳನ್ನು ಖಂಡಿಸಿ ಜ.6ರಂದು ಕೊಪ್ಪಳ ಬಂದ್​ಗೆ ಕರೆ ನೀಡಲಾಗಿದೆ ಎಂದು ಸಂವಿಧಾನ ಸಂರಕ್ಷಣಾ ಸಮಿತಿ ಜಿಲ್ಲಾ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ತಿಳಿಸಿದರು.

ದೇಶಕ್ಕೆ ಅಂಬೇಡ್ಕರ್​ ಕೊಡುಗೆ ಅಪಾರ. ಎಲ್ಲ ವರ್ಗದ ಜನರಿಗೆ ನ್ಯಾಯ ನೀಡಿದ್ದಾರೆ. ಎಲ್ಲ ವಿಮರ್ಶೆ, ಚರ್ಚೆಗಳ ಮೂಲಕ ಸಂವಿಧಾನ ರಚಿಸಿದ್ದಾರೆ. ಅಂಥ ಮೇಧಾವಿ ಬಗ್ಗೆ ಕೇಂದ್ರ ಗೃಹ ಮಂತ್ರಿ ಅಮಿತ್​ ಷಾ ಆಡಿದ ಮಾತು ಸರಿಯಲ್ಲ. ಶೋಷಿತರಿಗೆ ಅಂಬೇಡ್ಕರ್​ ದೇವರು. ಶೋಷಣೆ ಅನುಭವಿಸಿದವರಿಗೆ ಗೊತ್ತು. ದೇಶ ರಕ್ಷಿಸಬೇಕಾದ ಮಂತ್ರಿಯೊಬ್ಬರು ಹೀಗೆ ಮಾತನಾಡಿದ್ದು ಅಕ್ಷಮ್ಯ. ಮನುಸ್ಮ$ತಿ ಸುಡುವ ಬದಲು, ಅದನ್ನು ನಾವೆಲ್ಲ ಓದಬೇಕು. ಇದರಿಂದ ನಮ್ಮನ್ನ ಹೇಗೆ ತುಳಿದರು ಎಂಬುದನ್ನು ಅರ್ಥ ಆಗಲಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ನೈತಿಕತೆ ಇದ್ದರೆ ಅಮಿತ್​ ಷಾ ರಾಜೀನಾಮೆ ನೀಡಬೇಕು. ಕೇಂದ್ರ ಸರ್ಕಾರ ಅವರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ಇಲ್ಲ. ಸಂವಿಧಾನ ಸಂರಕ್ಷಣಾ ಸಮಿತಿಯಿಂದ ವಿವಿಧ ಪ್ರಗತಿಪರ ಸಂಘಟನೆಗಳು, ಅಹಿಂದ ಮತ್ತು ಅಲ್ಪ ಸಂಕ್ಯಾತ ಸಂಘಟನೆಗಳ ಸಹಯೋಗದಲ್ಲಿ ಬಂದ್​ಗೆ ಕರೆ ನೀಡಿದ್ದೇವೆ. ಅಂದು ನಗರದಲ್ಲಿ ಬೃಹತ್​ಪ್ರತಿಭಟನೆ ಹಮ್ಮಿಕೊಳ್ಳಲಿದ್ದು, ಷಾ ವಿರುದ್ಧ ಕ್ರಮಕ್ಕೆ ಆಗ್ರಹಿಸುತ್ತೇವೆಂದು ವಿವರಿಸಿದರು.

ಸಂಚಾಲಕರಾದ ಹನುಮೇಶ ಕಡೆಮನಿ, ಟಿ.ರತ್ನಾಕರ, ಈಶಪ್ಪ ಹರಿಜನ, ಸಲೀಂ ಖಾದ್ರಿ ಇತರರಿದ್ದರು.