ಕೊಪ್ಪಳ: ಕಟ್ಟಡ ಕಾರ್ಮಿಕ ಮಂಡಳಿಯಿಂದ ವಿವಿಧ ಯೋಜನೆಗಳಡಿ ಸಲ್ಲಿಕೆಯಾದ ಅರ್ಜಿಗಳನ್ನು ಸಕಾಲದಲ್ಲಿ ವಿಲೇವಾರಿ ಮಾಡುವಂತೆ ಆಗ್ರಹಿಸಿ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕಾರ್ಮಿಕರ ಸಂದ ಜಿಲ್ಲಾ ಪದಾಧಿಕಾರಿಗಳು ಶುಕ್ರವಾರ ನಗರದ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು.
ಮದುವೆ ಸಹಾಯಧನ, ಸ್ಕಾಲರ್ಶಿಪ್, ಅಂತ್ಯಸಂಸ್ಕಾರ ನಿಧಿ ಸೇರಿ ಇತರ ಯೋಜನೆಗಳಡಿ ಅರ್ಜಿ ಸಲ್ಲಿಸಿದರೂ ಸಕಾಲಕ್ಕೆ ವಿಲೇವಾರಿ ಮಾಡುತ್ತಿಲ್ಲ. ಮಕ್ಕಳ ಸ್ಕಾಲರ್ ಶಿಪ್ ಹಣ ಕಡಿತ ಮಾಡಲಾಗಿದೆ, ಸಣ್ಣ ಪುಟ್ಟ ಕಾರಣ ನೀಡಿ ಅರ್ಜಿ ತಿರಸ್ಕರಿಸಲಾಗುತ್ತಿದೆ.
ಇದರಿಂದ ನಿಜವಾದ ಲಾನುಭವಿಗಳಿಗೆ ಯೋಜನೆ ತಲುಪುತ್ತಿಲ್ಲ. ಅರ್ಜಿ ಸಲ್ಲಿಸಿ ವರ್ಷಗಳೇ ಕಳೆದರೂ ವಿಲೇವಾರಿ ಮಾಡುತ್ತಿಲ್ಲ. ಇದರಿಂದ ಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದರು.
ಸಕಾಲ ಸೇವೆಯಡಿ ಯೋಜನೆ ಜಾರಿಗೊಳಿಸಬೇಕು. ಅವಧಿಯೊಳಗೆ ವಿಲೇವಾರಿ ಮಾಡಬೇಕು. ಸ್ಕಾಲರ್ಶಿಪ್ ಹಣ ಕಡಿತ ಮಾಡಬಾರದು. ಸಣ್ಣಪುಟ್ಟ ಲೋಪಗಳಿದ್ದಲ್ಲಿ ಅರ್ಜಿದಾರರಿಗೆ ತಿಳಿಸಿ ಸರಿಪಡಿಸಿಕೊಳ್ಳಬೇಕು. ಕಾರ್ಮಿಕರಿಗೆ ಕಠಿಣವಾಗುವ ನಿಯಮಗಳನ್ನು ಕೈ ಬಿಡಬೇಕು.
ಮಂಡಳಿಯಲ್ಲಿ ನಡೆದ ಭ್ರಷ್ಟಾಚಾರ ಕುರಿತು ತನಿಖೆ ನಡೆಸಬೇಕು. ಪ್ರಸಕ್ತ ವರ್ಷ ಶಿಷ್ಯ ವೇತನ ಪಾವತಿಗೆ ಅರ್ಜಿ ಕರೆಯಬೇಕು ಎಂದು ಆಗ್ರಹಿಸಿದರು.
ಸಂಘದ ಜಿಲ್ಲಾ ಸಂಚಾಲಕ ಎಸ್.ಎ.ಗಫಾರ್, ಪದಾಧಿಕಾರಿಗಳಾದ ತುಕಾರಾಮ್ ಬಿ. ಪಾತ್ರೋಟಿ, ಹುಲುಗಪ್ಪ ಅಕ್ಕಿ ರೊಟ್ಟಿ, ತಿಮ್ಮಣ್ಣ ಎ.ಎಲ್., ನೂರ್ ಸಾಬ್ ಹೊಸಮನಿ, ಶಂಶುದ್ದೀನ್ ಮಕಾಂದಾರ್, ಮೊಹಮ್ಮದ್ ಖಾಸಿಮ್, ಮೌಲಾ ಸಾಬ್ ಕಪಾಲಿ, ಅಶೋಕ ಬಾವಿಮನಿ, ಯಂಕಣ ಬಡಿಗೇರ, ಮರ್ದಾನ್ ಸಾಬ್ ವಾಲಿಕಾರ್ ಇತರರಿದ್ದರು.