ಜಿಲ್ಲೆ

ಕೊಪ್ಪಳಕ್ಕೆ ಕಾರ್ಖಾನೆಗಳು ಬೇಡ, ಸದನದಲ್ಲಿ ಜನಪ್ರತಿನಿಧಿಗಳ ಗುಡುಗು

Kopala - Raveendra V K

ಕೊಪ್ಪಳ: ಜಿಲ್ಲಾ ಕೇಂದ್ರ ಕೊಪ್ಪಳ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಕಾರ್ಖಾನೆಗಳಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಬುಧವಾರ ಸದನದಲ್ಲಿ ಜನಪ್ರತಿನಿಧಿಗಳು ವಿಜಯವಾಣಿ ವರದಿ ಉಲ್ಲೇಖಿಸಿ ಧ್ವನಿ ಎತ್ತಿದ್ದು, ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಸಭೆ ನಡೆಸಿ ಪಾರದರ್ಶಕ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ಗುರಮಿಟ್ಕಲ್ ಶಾಸಕ ಶರಣಗೌಡ ಕಂದಕೂರ ಮಾತನಾಡಿ, ಉಕ ಭಾಗದ ಜನರ ಜೀವಕ್ಕೆ ಮಾರಕವಾಗುವ ಕಾರ್ಖಾನೆಗಳನ್ನು ಸರ್ಕಾರ ನೀಡುತ್ತಿದೆ. ಗವಿಶ್ರೀಗಳು ಕೊಪ್ಪಳಕ್ಕೆ ಕಾರ್ಖಾನೆ ಬೇಡವೆಂದು ಕಣ್ಣೀರಿಟ್ಟಿದ್ದಾರೆ. ಸರ್ಕಾರ ತಾಯಿ ಇದ್ದಂತೆ. ನಮಗೆ ವಿಷ ಕೊಟ್ಟರೂ ಕುಡಿಯುತ್ತೇವೆ. ನೀರು ಕೊಟ್ಟರೂ ಕುಡಿಯುತ್ತೇವೆಂದು ಮೊರೆ ಇಟ್ಟಿದ್ದಾರೆ. ನಮ್ಮ ಭಾಗದಲ್ಲಿ ಸರಿಯಾಗಿ ಕುಡಿಯಲು ನೀರಿಲ್ಲ. ಕಾರ್ಖಾನೆಗಳಿಂದ ಜನರ ಬದುಕು ದುಸ್ಥರವಾಗಿದೆ ಎಂದು ಸರ್ಕಾರದ ಗಮನ ಸೆಳೆದರು.

ವಿಪ ಸದಸ್ಯೆ ಹೇಮಲತಾ ನಾಯಕ ಮಾತನಾಡಿ, ಕೊಪ್ಪಳ ಭಾಗದಲ್ಲಿ ಈಗಾಗಲೇ 202ಕ್ಕೂ ಅಧಿಕ ಕಾರ್ಖಾನೆಗಳಿವೆ. ಅವುಗಳಿಂದ ಜನರ ಬದುಕು ನಾಶವಾಗುತ್ತಿದೆ. ಕೃಷಿ ಬೆಳೆ ಹಾಳಾಗಿವೆ. ಈ ಬಗ್ಗೆ ಅನೇಕ ವರದಿಗಳು ಬಂದಿವೆ. ನಾನೂ ಸ್ವತ@ ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದೇನೆ. ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಭರವಸೆ ನೀಡಿದ್ದರೂ ಕ್ರಮವಾಗಿಲ್ಲ. ಗವಿಶ್ರೀಗಳು ಹೋರಾಟ ಮಾಡಿ ಗಮನ ಸೆಳೆದಿದ್ದಾರೆ. ಬಿಎಸ್ಪಿಎಲ್ ಕಾರ್ಖಾನೆ ಕೊಪ್ಪಳದಿಂದ ಕೂಗಳತೆ ದೂರದಲ್ಲಿದೆ. ಅದು ಆರಂಭವಾದಲ್ಲಿ ಕೊಪ್ಪಳವನ್ನೇ ಸ್ಥಳಾಂತರ ಮಾಡಬೇಕಾದ ಪರಿಸ್ಥಿತಿ ಬರಲಿದೆ. ಸಿಎಂ ಮೌಖಿಕ ಆದೇಶ ನೀಡಿದ್ದರೂ ಕೆಲಸ ನಡೆದಿದೆ ಎಂದು ಜನರ ಸಮಸ್ಯೆ ಬಿಚ್ಚಿಟ್ಟರು. ವಿಜಯವಾಣಿ ಸೇರಿ ಮಾಧ್ಯಮಗಳಲ್ಲಿ ಬಂದ ವರದಿಗಳ ಬಗ್ಗೆ ಪ್ರಸ್ತಾಪಿಸಿದರು.

ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಮಾತನಾಡಿ, ಕೊಪ್ಪಳದಲ್ಲಿ ಕಾರ್ಖಾನೆಗಳಿಂದ ಸಾಕಷ್ಟು ಸಮಸ್ಯೆಯಾಗಿದೆ. ನಾವೆಲ್ಲ ಪಾತೀತವಾಗಿ ಸಿಎಂ ಬಳಿ ತೆರಳಿ ಮನವಿ ಸಲ್ಲಿಸಿದ್ದೇವೆ. ಮುಖ್ಯಮಂತ್ರಿಗಳು ನಮ್ಮೆದುರೆ ಡಿಸಿ, ಎಸ್ಪಿಗೆ ಕಾಮಗಾರಿ ನಿಲ್ಲಿಸಲು ಮೌಖಿಕ ಆದೇಶ ಮಾಡಿದ್ದಾರೆ. ಆದರೂ, ಕಾಮಗಾರಿ ನಡೆದಿದ್ದು, ಇದನ್ನು ತಡೆಬೇಕೆಂದು ಆಗ್ರಹಿಸಿದರು. ಈ ಬಗ್ಗೆ ಸಿಎಂ ಸದನದಲ್ಲಿ ಮಾತನಾಡಿ ಉತ್ತರಿಸುವಂತೆ ಒತ್ತಾಯಿಸಿದರು.

ಕಾರ್ಖಾನೆಗಳ ವಿರುದ್ಧ ಪಾರದರ್ಶಕ ಕ್ರಮ

ಕಾರ್ಖಾನೆಗಳ ವಿಷಯವಾಗಿ ಸದಸ್ಯರು ಎತ್ತಿದ ಪ್ರಶ್ನೆಗೆ ಉತ್ತರಿಸಿದ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್, ಕೊಪ್ಪಳದಲ್ಲಿ ಅಧಿಕ ಕಾರ್ಖಾನೆಗಳಿರುವುದು ನಿಜ. ಕೈಗಾರಿಕೆಗಳಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಗವಿಶ್ರೀಗಳು ನನ್ನೊಂದಿಗೆ ಮಾತನಾಡಿದ್ದಾರೆ. ಹೋರಾಟಗಳು ನಡೆದಿವೆ. ಈ ಬಗ್ಗೆ ಸರ್ಕಾರ ನೀಡುವ ವರದಿ ಮೇಲೆ ನಂಬಿಕೆ ಇಲ್ಲವೆಂದರೆ ಮೂರನೆ ಏಜೆನ್ಸಿಯಿಂದ ಮಾಲಿನ್ಯ ಬಗ್ಗೆ ತನಿಖೆ ನಡೆಸಿ ವರದಿ ಪಡೆಯೋಣ. ನಿಯಮ ಮೀರಿದವರ ವಿರುದ್ಧ ಪಾರದರ್ಶಕವಾಗಿ ಕ್ರಮ ಕೈಗೊಳ್ಳಲಾಗುವುದು. ಕೊಪ್ಪಳ, ಬಳ್ಳಾರಿ, ವಿಜಯನಗರ ಸೇರಿದಂತೆ ರಾಜ್ಯದಲ್ಲಿ ಕಾರ್ಖಾನೆಗಳು ಮಾಡುವ ಮಾಲಿನ್ಯದ ವಿರುದ್ಧ ಖಂಡಿತ ಸರ್ಕಾರ ಕ್ರಮ ಕೈಗೊಳ್ಳಲಿದೆ. ನಾನು ಕೊಪ್ಪಳಕ್ಕೆ ತೆರಳಿ ಗವಿಶ್ರೀಗಳು, ಜಿಲ್ಲೆಯ ಜನಪ್ರತಿನಿಧಿಗಳು, ಹೋರಾಟಗಾರರು, ಪರಿಸರ ಪ್ರೇಮಿಗಳೊಡನೆ ಸಭೆ ನಡೆಸುವೆ. ಅಲ್ಲಿ ಹಾನಿ ಸಂಭವಿಸುತ್ತಿದೆ ಎಂದು ಮನವರಿಕೆಯಾದಲ್ಲಿ ಬಿಎಸ್ಪಿಎಲ್ಗೆ ನೀಡಿದ ಪರವಾನಗಿ ರದ್ದು ಮಾಡುತ್ತೇವೆ. ಇಲ್ಲದಿದ್ದರೆ ಅವರ ಬಗ್ಗೆಯೋ ಯೋಚಿಸಬೇಕು. ನಾವು ಏಕಪಯವಾಗಿ ನಿರ್ಧಾರ ಕೈಗೊಳ್ಳಲು ಬರುವುದಿಲ್ಲ ಎಂದು ಉತ್ತರಿಸಿದರು.

ಶಾಸಕ ಹಿಟ್ನಾಳ ಮೌನ

ಜಿಲ್ಲಾ ಕೇಂದ್ರ ಕೊಪ್ಪಳ ಕ್ಷೇತ್ರ ವ್ಯಾಪ್ತಿಯಲ್ಲೇ ಬಹುತೇಕ ಸ್ಪಾಂಜ್, ಐರನ್ ಕಾರ್ಖಾನೆಗಳಿವೆ. ಇದೀಗ ಕೊಪ್ಪಳಕ್ಕೆ ಹೊಂದಿಕೊಂಡೇ ಹೊಸ ಕಾರ್ಖಾನೆ ತಲೆ ಎತ್ತುತ್ತಿದೆ. ಈ ಬಗ್ಗೆ ಗವಿಶ್ರೀಗಳ ನೇತೃತ್ವದಲ್ಲಿ ನಡೆದ ಹೋರಾಟದಲ್ಲಿ ಎಲ್ಲ ಜನಪ್ರತಿನಿಧಿಗಳು ಸದನದಲ್ಲಿ ಧ್ವನಿ ಎತ್ತುವುದಾಗಿ ಭರವಸೆ ನೀಡಿದ್ದರು. ಈ ಪೈಕಿ ಕೊಪ್ಪಳ ಶಾಸಕ ರಾವೇಂದ್ರ ಹಿಟ್ನಾಳ ಜನರ ಪರವಾಗಿ ಮೊದಲಿಗೆ ಧ್ವನಿ ಎತ್ತಬೇಕಿತ್ತು. ಆದರೆ, ಈವರೆಗೆ ಅವರು ಈ ಬಗ್ಗೆ ಮಾತನಾಡದಿರುವುದು ಜನರಲ್ಲಿ ಬೇಸರ ಮೂಡಿಸಿದೆ. ಈ ನಡುವೆ, ಕೊಪ್ಪಳ ತಾಲೂಕು ಕ್ರೀಡಾಂಗಣದಲ್ಲಿ ಅದ್ದೂರಿ ಹೋಳಿ ಆಚರಿಸಿದ್ದು, ಸಿಂದೋಗಿಯಲ್ಲಿ ಕಾರ್ಖಾನೆಯೊಂದರ ಸಹಯೋಗದಲ್ಲಿ ಆರೋಗ್ಯ ತಪಾಸಣಾ ಶಿಬಿರ ನಡೆಸಿದ್ದು ಹಲವರಲ್ಲಿ ಹತ್ತಾರು ಪ್ರಶ್ನೆ ಹುಟ್ಟುಹಾಕಿದೆ. ಹೀಗಾಗಿ ಜನರು ಕಾರ್ಖಾನೆ ವಿಷಯವಾಗಿ ಶಾಸಕರ ನಿಲುವೆನು ಎಂದು ಪ್ರಶ್ನಿಸುತ್ತಿದ್ದಾರೆ.