ಕೊಪ್ಪಳ: ನಗರಕ್ಕೆ ಹೊಂದಿಕೊಂಡು ಬಿಎಸ್ಪಿಎಲ್ ಕಾರ್ಖಾನೆ ನಿರ್ಮಾಣ ಆದೇಶ ರದ್ದುಪಡಿ ಆದೇಶಿಸುವಂತೆ ಒತ್ತಾಯಿಸಿ ಕೊಪ್ಪಳ ತಾಲೂಕು ಪರಿಸರ ಹಿತರಕ್ಷಣಾ ವೇದಿಕೆ ಪದಾಧಿಕಾರಿಗಳು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿಗೆ ಮಂಗಳವಾರ ಕೊಪ್ಪಳದಲ್ಲಿ ಮನವಿ ಸಲ್ಲಿಸಿದರು.
ಕೊಪ್ಪಳಕ್ಕೆ ಹೊಂದಿಕೊಂಡೇ ಕಾರ್ಖಾನೆ ಆರಂಭಿಸಲಾಗುತ್ತಿದೆ. ವಾರ್ಷಿಕ 10.5ದಶಲಕ್ಷ ಟನ್ ಕಬ್ಬಿಣ ಉತ್ಪಾದಿಸುವುದಾಗಿ ಕಂಪನಿ ಹೇಳಿಕೊಂಡಿದೆ. ಇದರಿಂದ ಕೊಪ್ಪಳ ಪರಿಸರ ಹಾಳಾಗಲಿದೆ. ಹೋರಾಟ ಮಾಡಿ ಮನವಿ ಸಲ್ಲಿಸಿದ್ದು ಸರ್ಕಾರ ತಾತ್ಕಾಲಿಕವಾಗಿ ಕಾಮಗಾರಿ ನಿಲ್ಲಿಸಲು ಮೌಖಿಕ ಆದೇಶ ನೀಡಿದೆ. ಆದರೆ, ಈವರೆಗೆ ರದ್ದಾದ ಬಗ್ಗೆ ಲಿಖಿತ ಆದೇಶ ಬಂದಿಲ್ಲವೆಂದರು.
ಈ ಬಗ್ಗೆ ಜಿಲ್ಲೆಯ ಜನಪ್ರತಿನಿಧಿಗಳು ಸಿಎಂ ಗಮನಕ್ಕೆ ಇನ್ನೊಮ್ಮೆ ತರಬೇಕು. ಕಂಪನಿ ಆರಂಭಿಸದಂತೆ ಒತ್ತಾಯಿಸಬೇಕು. ರದ್ದುಪಡಿಸಿದ ಬಗ್ಗೆ ಲಿಖಿತ ಆದೇಶ ಹೊರಡಿಸಬೇಕೆಂದು ಒತ್ತಾಯಿಸಿದರು. ನಗರಸಭೆ ಸದಸ್ಯ ಮುತ್ತು ಕುಷ್ಟಗಿ, ವೇದಿಕೆ ಪದಾಧಿಕಾರಿಗಳಾದ ರಮೇಶ ತುಪ್ಪದ, ಶಿವಕುಮಾರ ಕುಕನೂರು, ಸೋಮಗೌಡ ಹೊಗರನಾಳ, ಜ್ಯೋತಿಗೊಂಡಬಾಳ, ಶರಣು ಡೊಳ್ಳಿನ್, ಮಂಜುನಾಥ ಗೊಂಡಬಾಳ ಇತರರಿದ್ದರು.