ಕೊಪ್ಪಳ: ದೇಶದಲ್ಲಿ 1975ರಲ್ಲಿ ತುರ್ತು ಪರಿಸ್ಥಿತಿ ಹೇರಿದ್ದನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಸೋಮವಾರ ನಗರದ ಮುಂಡರಗಿ ಭೀಮರಾಯ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಇಂದಿರಾ ಗಾಂಧಿ ಪ್ರಧಾನಿ ಆಗಿದ್ದಾಗ ದೇಶದಲ್ಲಿ ತುರ್ತು ಪರಿಸ್ಥಿತಿ ಏರುವ ಮೂಲಕ ಕಾಂಗ್ರೆಸ್ ಸಂವಿಧಾನಕ್ಕೆ ದ್ರೋಹ ಮಾಡಿದೆ. ಕಾಂಗ್ರೆಸ್ಸಿಗರು ಸ್ವಾರ್ಥಕ್ಕಾಗಿ ಸಂವಿಧಾನ ದುರ್ಬಳಕೆ ಮಾಡಿಕೊಂಡಿದ್ದಾರೆ. ಅವರಿಗೆ ಸಂವಿಧಾನ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಅಂದು ತುರ್ತು ಪರಿಸ್ಥಿತಿಯನ್ನು ವಿರೋಧಿಸಿದ್ದ ಸಿದ್ದರಾಮಯ್ಯ ಇಂದು ಮೌನವಹಿಸಿದ್ದಾರೆ. ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ರ್ಖಗೆ ದೇಶದ ಜನರ ಕ್ಷಮೆ ಕೇಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ವಿರುದ್ಧ ಪೋಸ್ಟರ್ ಪ್ರದರ್ಶಿಸಿದರು. ಬಳಿಕ ಕಾಂಗ್ರೆಸ್ ಕಚೇರಿಗೆ ಪೋಸ್ಟರ್ ಅಂಟಿಸಲು ತೆರಳಲು ಯತ್ನಿಸಿದರು. ಈ ವೇಳೆ ಅಡ್ಡಿಪಡಿಸಿದ ಪೊಲೀಸರು ಅದಕ್ಕೆ ಅವಕಾಶ ನೀಡಲಿಲ್ಲ. ನಂತರ ಪ್ರತಿಭಟನಕಾರರನ್ನು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣವರ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಪ್ರಧಾನ ಕಾರ್ಯದರ್ಶಿ ರಮೇಶ್ ನಾಡಿಗೇರ್, ಪ್ರಮುಖರಾದ ಸುನೀಲ್ ಹೆಸರೂರು, ಪ್ರದಿಪ್ ಹಿಟ್ನಾಳ, ಅಪ್ಪಣ್ಣ ಪದಕಿ, ಪುಟ್ಟರಾಜ ಚಕ್ಕಿ, ಮಹೇಶ್ ಅಂಗಡಿ, ಗಣೇಶ ಹೊರತಟ್ನಾಳ ಇತರರಿದ್ದರು.