ಜಿಲ್ಲೆ

ವಕ್ಫ್​ ಸಮಸ್ಯೆ ಖಂಡಿಸಿ ಬಿಜೆಪಿ ಪ್ರತಿಭಟನೆ ನಾಳೆ

Kopala - Raveendra V K

ಕೊಪ್ಪಳ: ರೈತರ ಪಹಣಿಯಲ್ಲಿ ವಕ್ಫ್​ ಹೆಸರು ನಮೂದಿಸಿ ಸಮಸ್ಯೆ ಮಾಡಿರುವ ಸರ್ಕಾರದ ಕ್ರಮ ಖಂಡಿಸಿ ನ.22ರಂದು ಡಿಸಿ ಕಚೇರಿ ಮುಂಭಾಗದಲ್ಲಿ ಹೋರಾಟ ನಡೆಸಲಾಗುವುದೆಂದು ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣವರ ತಿಳಿಸಿದರು.

ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ವಕ್ಫ್​ ಹೆಸರಿನಲ್ಲಿ ಸರ್ಕಾರ ರೈತರನ್ನು ನಿರ್ನಾಮ ಮಾಡತ್ತಿದೆ. ಈ ಬಗ್ಗೆ ನಾವು ಮೊದಲಿನಿಂದಲೂ ಹೋರಾಟ ಮಾಡುತ್ತಿದ್ದೇವೆ. ನೂರಾರು ವರ್ಷಗಳಿಂದ ಉಳುಮೆ ಮಾಡುತ್ತಿರುವ ಜಮೀನುಗಳು ವಕ್ಫ್​ ಆಸ್ತಿ ಎಂದು ಬೋರ್ಡ್​ ಹೇಳುತ್ತಿದೆ. ರೈತರ ಗಮನಕ್ಕೆ ತರದೇ ನೋಟಿಸ್​ ನೀಡದೆ ಏಕಾಏಕಿ ಪಹಣಿಯಲ್ಲಿ ವಕ್ಫ್​ ಹೆಸರು ನಮೂದಿಸುತ್ತಿದ್ದಾರೆ. ಇದರಿಂದ ರೈತರಿಗೆ ಸಾಲ ಸೌಲಭ್ಯ, ಮಾರಾಟ, ಇತರ ವ್ಯವಹಾರ ನಡೆಸಲು ತೊಂದರೆಯಾಗಿದೆ. ಇದನ್ನು ತಾರ್ಕಿಕ ಅಂತ್ಯ ಕಾಣಿಸಲು ನಮ್ಮ ಪಕ್ಷ ನಿರ್ಧರಿಸಿದೆ. ಇದಕ್ಕಾಗಿ ರೈತರಿಗೆ ಸಹಾಯವಾಣಿ ಆರಂಭಿಸಿದ್ದೇವೆ. ನಮ್ಮ ಜಿಲ್ಲೆಯಲ್ಲಿ 50&60 ರೈತರಿಗೆ ಈ ರೀತಿಯಾಗಿದೆ ಎಂದರು.

ಇದನ್ನು ಖಂಡಿಸಿ ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ಹೋರಾಟ ಹಮ್ಮಿಕೊಳ್ಳಲಾಗಿದೆ. ಕೊಪ್ಪಳದಲ್ಲಿ ನ.22ರಂದು ಪ್ರತಿಭಟನೆ ಇದೆ. ರಾಜ್ಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಪಕ್ಷ ನಾಯಕ ಆರ್​.ಅಶೋಕ, ಪರಿಷತ್​ ಪ್ರತಿಪಕ್ಷ ನಾಯಲಕ ಛಲವಾದಿ ನಾರಾಯಣಸ್ವಾಮಿ ನೇತೃತ್ವದ ತಂಡಗಳು ಪ್ರವಾಸ ನಡೆಸಿ ರೈತರ ಸಮಸ್ಯೆ ಆಲಿಸಲಿವೆ. ನೂರಾರು ರೈತರು ಭಾಗಿಯಾಗಲಿದ್ದು, ಅವರಿಗೆ ವಕ್ಫ್​ ಕಾಯ್ದೆ, ಅದರಿಂದ ಆಗುತ್ತಿರುವ ಸಮಸ್ಯೆಗಳ ಕುರಿತು ಮಾಹಿತಿ ನೀಡುತ್ತೇವೆ ಎಂದು ತಿಳಿಸಿದರು. ಜಿಲ್ಲಾ ಮಾಧ್ಯಮ ಸಹ ಸಂಚಾಲಕ ಪ್ರಸಾದ ಗಾಳಿ ಇದ್ದರು.