ಕೊಪ್ಪಳ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದ ಸಾವಿರಾರು ಕೋಟಿ ರೂ. ಹಗರಣ ಖಂಡಿಸಿ ನಾಳೆ(ಜು.12) ಬಿಜೆಪಿ ಮುಡಾ ಚಲೋ ಅಭಿಯಾನ ನಡೆಸಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣವರ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಸಿಎಂ ಸಿದ್ದರಾಮಯ್ಯ ಪತ್ನಿಗೆ 3 ಎಕರೆ ಬದಲು 14 ನಿವೇಶನ ಹಂಚಿಕೆ ಮಾಡಿದ್ದಾರೆ. ಮಲ್ಲಿಕಾರ್ಜುನ ಎಂಬುವರ ಹೆಸರಿನಲ್ಲಿದ್ದ ಭೂಮಿ ಮೊದಲು ಸ್ವಾಧೀನ ಆಗಿತ್ತು. ಡಿನೋಟಿಫಿಕೇಷನ್ ಮಾಡಿ ಸಿದ್ದರಾಮಯ್ಯ ಪತ್ನಿ ಹೆಸರಿಗೆ ಮಾಡಿದ್ದಾರೆ. ನಂತರ ಮತ್ತೆ ಭೂಸ್ವಾಧೀನ ಪಡಿಸಿಕೊಂಡಿದ್ದಾರೆ. ಸ್ಟ್ರೇ ಸೈಟ್ ಹಂಚಿಕೆಗೆ ಮಾನದಂಡಗಳಿವೆ. ಯುದ್ಧಭೂಮಿಯಲ್ಲಿ ಮಡಿದವರ ಕುಟುಂಬ, ರಾಜ್ಯ, ರಾಷ್ಟ್ರ ಪ್ರಶಸ್ತಿ ಪಡೆದವರು ಸೇರಿ ಇತರರಿಗೆ 25% ಹಂಚಿಕೆ ಮಾಡಲು ಅವಕಾಶವಿದೆ. ಸಿದ್ದರಾಮಯ್ಯ ಪತ್ನಿಗೆ ನೇರವಾಗಿ ಯಾವ ಮಾನದಂಡದ ಮೇಲೆ ಹಂಚಿಕೆ ಮಾಡಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಪ್ರಶ್ನಿಸಿದರು.
ಅವರ ಭೂಮಿಗೆ ಬದಲಾಗಿ ಎರಡು ಸೈಟ್ ನೀಡಬಹುದು. ಆದರೆ, 14 ಸೈಟ್ ನೀಡಿದ್ದಾರೆ. ಸಚಿವ ಬೈರತಿ ಸುರೇಶ ಮುಡಾಅಧಿಕಾರಿಗಳ ವರ್ಗಾವಣೆ ಮಾಡುತ್ತಿದ್ದಾರೆ. ದಾಖಲಾತಿಗಳು ಲಭ್ಯವಿಲ್ಲ ಎಂಬ ಆರೋಪವಿದೆ. ಈ ಬಗ್ಗೆ ಸಿಬಿಐ, ನ್ಯಾಯಾಂಗ ತನಿಖೆ ನಡೆಸಬೇಕು. ಎಸ್ ಐಟಿ ತನಿಖೆ ಗಂಭೀರವಾಗಿಲ್ಲ. ರಾಜ್ಯ ಸರ್ಕಾರದ ಪರವಾಗಿ ಕೆಲಸಮಾಡುತ್ತಿದೆ. ನಮಗೆ ಅದರ ಮೇಲೆ ನಂಬಿಕೆ ಇಲ್ಲ. ಮೈಸೂರಿನಲ್ಲಿ ಹೋರಾಟ ಮಾಡಲಾಗುತ್ತದೆ. ಸದನದಲ್ಲೂ ಈ ಬಗ್ಗೆ ನಮ್ಮ ಶಾಸಕರು ಧ್ವನಿ ಎತ್ತಲಿದ್ದಾರೆ ಎಂದು ತಿಳಿಸಿದರು.
ಇಡಿ ದಾಳಿ ಬಗ್ಗೆ ಪ್ರತಿಕ್ರಿಯಿಸಿ, ಹಗರಣ ಮಾಡುವ ಚಟ ಇದೆ. ಹವಾಲ ದಂಧೆ ನಡೆದ ಕಾರಣ ಇಡಿ ದಾಳಿ ನಡೆದಿದೆ. ಹಗರಣ ಮಾಡಿದವರು ಕಾಂಗ್ರೆಸ್ಸಿಗರು. ಅದಕ್ಕೆ ಅವರ ಮೇಲೆ ದಾಳಿ ನಡೆದಿದೆ. ಸುಮ್ಮನೆ ಬೇರೆಯವರ ಮೇಲೆ ದಾಳಿ ನಡೆಸಲಾಗುವುದಾ ? ಎಂದರು.
ಮಾಜಿ ಶಾಸಕ ಬಸವರಾಜ ದಢೇಸುಗೂರು ಮಾತನಾಡಿ, ನಮ್ಮ ಸರ್ಕಾರ ವರ್ಗಾವಣೆ ದಂಧೆ ಮಾಡಿಲ್ಲ. ನಾವು 1.5, ಎರಡು ವರ್ಷಕ್ಕೊಮ್ಮೆ ವರ್ಗಾವೇ ನಡೆದಿದೆ. ಇವರು 11 ತಿಂಗಳಿಗೆ ವರ್ಗಾವಣೆ ಮಾಡುತ್ತಿದ್ದಾರೆ. ಉಸ್ತುವಾರಿ ಸಚಿವರು ಎಸ್ಪಿನ ಕಳಿಸಬೇಕು ಅಂದರೆ, ಶಾಸಕರು ಉಳಿಸಿಕೊಳ್ಳಬೇಕು ಅನ್ನುತ್ತಾರೆ. ನಮ್ಮ ಸರ್ಕಾರದಲ್ಲಿ ವರ್ಗಾವಣೆ ದಂಧೆ ಇರಲಿಲ್ಲ. ಈಗ ನಡೆಯುತ್ತಿದೆ.
ಸಿಎಂ ಮುಂದಿನಿಂದ ಭ್ರಷ್ಟಾಚಾರ ಮಾಡುವುದಿಲ್ಲ. ಹಿಂದಿನಿಂದ ಮಾಡುತ್ತಾರೆ. ಯಾವುದೇ ಕಾಮಗಾರಿ ನಡೆಸದೇ ನೂರಾರು ಕೋಟಿ ರೂ. ವರ್ಗಾವಣೆ ಆಗಿದೆ. ಈ ಬಗ್ಗೆ ಸಂಬಂಧಿಸಿದ ಸಚಿವ, ಸಿಎಂಗೆ ಗೊತ್ತಿಲ್ಲವೆಂದರೆ ಹೇಗೆ? ಹೆಸರಿಗೆ ಪಾರದರ್ಶಕ ಆಡಳಿತ ಎನ್ನುತ್ತಾರೆ. ನೆಕ್ಕಂಟಿ ನಾಗರಾಜ ಅಮಾಯಕ. ಅಧಿಕಾರಿ, ಜನಪ್ರತಿನಿಧಿಯಲ್ಲ. ಸಾಮಾನ್ಯ ಮನುಷ್ಯ. ತನಿಖೆ ಬಗ್ಗೆ ಆತನ ಪಾತ್ರ ತಿಳಿಯಲಿದೆ ಎಂದರು.
ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಡಾ.ಬಸವರಾಜ ಕ್ಯಾವಟರ್ ಮಾತನಾಡಿ, ದೆಹಲಿಯಲ್ಲಿ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಭೇಟಿ ಮಾಡಿರುವೆ. ಜಿಲ್ಲೆಯ ರೈಲ್ವೆ ಯೋಜನೆಗಳನ್ನು ಅನುಷ್ಠಾನ ಮಾಡುವಂತೆ ಮನವಿ ಸಲ್ಲಿಸಿರುವೆ ಎಂದರು.
ರಾಜ್ಯ ಮಾಧ್ಯಮ ಸಂಯೋಜಕ ಪ್ರಮೋದ ಕಾರ್ಕೂನ, ಜಿಲ್ಲಾ ವಕ್ತಾರ ಸೋಮಶೇಖರಗೌಡ ಇದ್ದರು.