ಕೊಪ್ಪಳ: ತಾಲೂಕಿನ ಭಾಗ್ಯನಗರ ಪಟ್ಟಣದಲ್ಲಿ ಕಾಲೇಜು ಶಿಕ್ಷಣ ಇಲಾಖೆ ಅಧಿಕಾರಿಗಳ ತಂಡ ಸರ್ಕಾರಿ ಪದವಿ ಕಾಲೇಜು ಆರಂಭಕ್ಕೆ ಬೇಕಾದ ಸೌಕರ್ಯಗಳನ್ನು ಶುಕ್ರವಾರ ಪರಿಶೀಲಿಸಿತು.
ಪಟ್ಟಣದಲ್ಲಿ ಪದವಿ ಕಾಲೇಜು ಆರಂಭಿಸುವಂತೆ ಜನರು ಬೇಡಿಕೆ ಸಲ್ಲಿಸಿದ್ದರು, ಈ ಬೆನ್ನಲ್ಲೇ ಆಗಮಿಸಿದ ಅಧಿಕಾರಿಗಳು ಜಾಗ ಸೇರಿ ಇತರ ಸೌಕರ್ಯ ಪರಿಶೀಲಿಸಿದರು. ಕೊಪ್ಪಳ ಸರ್ಕಾರಿ ಪದವಿ ಕಾಲೇಜು ಪ್ರಾಚಾರ್ಯ ಹನುಮಂತ ನಾಯಕ ದೊಡ್ಮನಿ, ಉಪನ್ಯಾಸಕ ಶಿವನಾಥ್ ಇ.ಜಿ. ನಿಯೋಗ ಸರ್ಕಾರಿ ಪಿಯು ಕಾಲೇಜಿಗೆ ಭೇಟಿ ನೀಡಿತು. ಪಿಯು ಪ್ರಾಚಾರ್ಯ ರಾಜಶೇಖರ ಪಾಟೀಲ್ ಪದವಿ ಕಾಲೇಜು ಆರಂಭಕ್ಕೆ ಬೇಕಾದ ಸೌಲಭ್ಯಗಳಿರುವ ಬಗ್ಗೆ ಮನವರಿಕೆ ಮಾಡಿದರು. ಕೊಠಡಿ, ಮೈದಾನ, ಶೌಚಗೃಹ, ಕುಡಿವ ನೀರು ಮಾಹಿತಿ ನೀಡಿದರು. ಅಗತ್ಯ ಬಿದ್ದಲ್ಲಿ ನಿಷ್ಕ್ರಿಯವಾಗಿರುವ ಪವರ್ಲೂಮ್ ನೇಕಾರರ ಸಹಕಾರ ಉತ್ಪಾದಕ ಮತ್ತು ಮಾರಾಟ ನಿಯಮಿತ ಸಂಸ್ಥೆ ಕಟ್ಟಡಗಳಿದ್ದು ಬಳಸಿಕೊಳ್ಳಲು ಇರುವ ಅವಕಾಶ ತಿಳಿಸಿದರು.
ಭಾಗ್ಯನಗರ ಸರ್ಕಾರಿ ಪದವಿ ಕಾಲೇಜು ಹೋರಾಟ ಸಮಿತಿ ಅಧ್ಯಕ್ಷ ರಾಘವೇಂದ್ರ ಪಾನಘಂಟಿ, ಪಟ್ಟಣ ಪಂಚಾಯತ್ ಉಪಾಧ್ಯಕ್ಷ ಹೊನ್ನೂರಸಾಬ್ ಬೈರಾಪುರ, ಪ್ರಮುಖರಾದ ಶಿವರಾಮ್ ಮೇಗಳಮನಿ, ಮೋಹನ್ ಅರಕಲ್, ಕೃಷ್ಣಾ ಇಟ್ಟಂಗಿ ಇತರರಿದ್ದರು.