ಕೊಪ್ಪಳ: ಭಾಗ್ಯನಗರ ಪಟ್ಟಣದಲ್ಲಿ ಪ್ರತಿ ವರ್ಷ 400ಕ್ಕೂ ಅಧಿಕ ವಿದ್ಯಾರ್ಥಿಗಳು ಪಿಯುಸಿ ಮುಗಿಸುತ್ತಿದ್ದಾರೆ. ಅವರಿಗೆ ಅನುಕೂಲವಾಗು ನಿಟ್ಟಿನಲ್ಲಿ ಪದವಿ ಕಾಲೇಜು ಆರಂಭಿಸಬೇಕೆಂದು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಶ್ರೀನಿವಾಸ ಗುಪ್ತಾ ಸಚಿವ ಶಿವರಾಜ ತಂಗಡಗಿಗೆ ಒತ್ತಾಯಿಸಿದರು.
ನಗರದ ಲಾಲ್ ಬಹಾದ್ದೂರ್ ಶಾಸ್ತ್ರಿ ವೃತ್ತದಲ್ಲಿ ಶುಕ್ರವಾರ ಸಚಿವರಿಗೆ ಮನವಿ ಸಲ್ಲಿಸಿ ಮಾತನಾಡಿದರು.
ಜಿಲ್ಲೆಯಲ್ಲಿ 11 ಸರ್ಕಾರಿ ಪದವಿ ಕಾಲೇಜುಗಳಿದ್ದರೂ ಕೊಪ್ಪಳ ಹೊರತು ಪಡಿಸಿ ಇತರ ತಾಲೂಕುಗಳಲ್ಲಿ ಅಧಿಕ ಇವೆ. ಬೇರೆಡೆ ಇರುವ ಕಾಲೇಜುಗಳಲ್ಲಿ ಇಷ್ಟೊಂದು ಪ್ರಮಾಣದ ದಾಖಲಾತಿ ಇಲ್ಲ. ಸದ್ಯ ಈಗಿರುವ ಕಾಲೇಜುಗಳ ಆರಂಭಕ್ಕೆ ಇರುವ ಮಾನದಂಡಗಳು ಭಾಗ್ಯನಗರದಲ್ಲೂ ಇವೆ. 30 ಸಾವಿರ ಜನಸಂಖ್ಯೆ ಇದೆ. ಉದ್ಯಮಗಳಿವೆ. ನಾಲ್ಕು ಸರ್ಕಾರಿ, ಮೂರು ಖಾಸಗಿ ಪಿಯು ಕಾಲೇಜುಗಳಿವೆ. ಪ್ರತಿ ವರ್ಷ ಒಂದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀೆ ಬರೆಯುತ್ತಾರೆ. ಶೇ.70ರಷ್ಟು ಪಾಸಾದರೂ 700 ಮಕ್ಕಳಾಗುತ್ತಾರೆ. ಹೀಗಾಗಿ ಮನವಿ ಪರಿಗಣಿಸಿ ಪದವಿ ಕಾಲೇಜು ಮಂಜೂರು ಮಾಡಿಸಲು ಒತ್ತಾಯಿಸಿದರು.
ಸಚಿವ ತಂಗಡಗಿ, ಈ ಬಗ್ಗೆ ಸರ್ಕಾರದ ಗಮನಕ್ಕೆ ತರುವೆ ಎಂದರು. ವಿಪ ಸದಸ್ಯೆ ಹೇಮಲತಾ ನಾಯಕ ಮಾತನಾಡಿ, ಅಧಿವೇಶದದಲ್ಲಿ ಚರ್ಚಿಸುವ ಭರವಸೆ ನೀಡಿದರು. ಸಂಸದ ರಾಜಶೇಖರ ಹಿಟ್ನಾಳ ಸಹ ಮನವಿ ಸ್ವೀಕರಿಸಿದರು.
ಭಾಗ್ಯನಗರ ನಿವಾಸಿಗಳಾದ ರಾವೇಂದ್ರ ಪಾನಂಟಿ, ಕೃಷ್ಣಾ ಇಟ್ಟಂಗಿ, ತುಕಾರಾಮಪ್ಪ ಗಡಾದ, ಹೊನ್ನೂರಸಾಬ್ ಬೈರಾಪುರ, ದಾನಪ್ಪ ಕವಲೂರು, ಪ್ರಹ್ಲಾದ್ ಅಗಳಿ, ಸಂಗೀತಾ ಕಲ್ಲೇಶ, ಡಾ.ಕೊಟ್ರೇಶ ಶೆಡ್ಮಿ, ಡಿ.ಎಂ.ಬಡಿಗೇರ ಇತರರಿದ್ದರು.