ಕೊಪ್ಪಳ: ಭಾಗ್ಯನಗರ ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಹೇಳಿದರು.
ತಾಲೂಕಿನ ಭಾಗ್ಯನಗರದ ಪಟ್ಟಣದಲ್ಲಿ ಶುಕ್ರವಾರ ಆಯೋಜಿಸಿದ್ದ ನಗರೋತ್ಥಾನ 4ನೇ ಹಂತದ ಅಭಿವೃದ್ಧಿ ಕಾಮಗಾರಿಗಳಿಗೆ ಅಡಿಗಲ್ಲು ನೆರವೇರಿಸಿ ಮಾತನಾಡಿದರು.
ಅನೇಕ ಹೋರಾಟದ ಲವಾಗಿ ಭಾಗ್ಯನಗರ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದೆ. ವಿವಿಧ ಅಭಿವೃದ್ಧಿ ಕೆಲಸಗಳಿಗಾಗಿ ಇಲ್ಲಿನ ಜನರು ನಿರಂತರ ಹೋರಾಟ ಮಾಡುತ್ತಿದ್ದಾರೆ. ಪರಿಣಾಮ ರೈಲ್ವೇ ಮೇಲ್ಸೇತುವೆ ಜತೆಗೆ ಇತರ ಕಾಮಗಾರಿಗಳು ಪೂರ್ಣಗೊಂಡಿವೆ. ಸದ್ಯ ನಗರೋತ್ಥಾನ ನಾಲ್ಕನೇ ಹಂತದಲ್ಲಿ 3.38 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ರಸ್ತೆ, ಚರಂಡಿ ಸೇರಿ ಇತರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದರು.
ಕಿಮ್ಸ್ 450 ಹಾಸಿಗೆಯ ಆಸ್ಪತ್ರೆ ಹಾಗೂ ಇತರ ಕಾಮಗಾರಿಗಳಿಗೆ ಸಿಎಂ ಸಿದ್ದರಾಮಯ್ಯ ಅವರು ಮುಂದಿನ ತಿಂಗಳು ಚಾಲನೆ ನೀಡಲಿದ್ದಾರೆ. ಭಾಗ್ಯನಗರಕ್ಕೆ 24*7 ಕುಡಿವ ನೀರು, ಇ&ಲೈಬ್ರರಿ, ಪದವಿ ಕಾಲೇಜು ಮಂಜೂರು ಮಾಡಿಸಲು ಪ್ರಯತ್ನಿಸುವೆ ಎಂದುಇ ಭರವಸೆ ನೀಡಿದರು.
ಸಂಸದ ರಾಜಶೇಖರ ಹಿಟ್ನಾಳ ಮಾತನಾಡಿ, ಭಾಗ್ಯನಗರ ವೇಗವಾಗಿ ಬೆಳೆಯುತ್ತಿದೆ. ಮೆಡಿಕಲ್ ಕಾಲೇಜಿನಿಂದ ಭಾಗ್ಯನಗರ ಮಾರ್ಗವಾಗಿ ರಿಂಗ್ ರೋಡ್ ಅವಶ್ಯವಿದ್ದು, ಈ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದೇವೆ ಎಂದರು.
ಮಾಜಿ ಸಂಸದ ಸಂಗಣ್ಣ ಕರಡಿ ಮಾತನಾಡಿ, ಭಾಗ್ಯನಗರಕ್ಕೆ ಪದವಿ ಕಾಲೇಜು ಮಂಜೂರು ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ ಗುಪ್ತಾ, ಭಾಗ್ಯನಗರ ಪಪಂ ಅಧ್ಯಕ್ಷ ತುಕಾರಾಮಪ್ಪ ಗಡಾದ, ಉಪಾಧ್ಯಕ್ಷ ಹೊನ್ನುರಸಾಬ ಭೈರಾಪುರ, ಡಿಸಿಸಿ ಅಧ್ಯಕ್ಷ ಅಮರೇಗೌಡ ಬಯ್ಯಾಪುರ, ಪ್ರ.ಕಾ.ಕೃಷ್ಣ ಇಟ್ಟಂಗಿ, ಜಿಪಂ ಮಾಜಿ ಸದಸ್ಯ ಗೂಳಪ್ಪ ಹಲಗೇರಿ, ಪ್ರಮುಖರಾದ ಯಮನಪ್ಪ ಕಬ್ಬೇರ್, ಎಂ.ಕಾಟನ್ ಪಾಷಾ, ಗಾಳೆಪ್ಪ ಪೂಜಾರ ಇತರರಿದ್ದರು.