ಜಿಲ್ಲೆ

ಹಾಸ್ಟೆಲ್​ಗೆ ತೆರಳಿ ಸಮೀಕ್ಷೆ, ಜನಗಣತಿ ಗುರಿ ನೀಡಿದ ಆಯೋಗ

Kopala - Raveendra V K

ವಿಜಯವಾಣಿ ವಿಶೇಷ ಕೊಪ್ಪಳ

ಹಿಂದುಳಿದ ವರ್ಗಗಳ ಆಯೋಗ ಹಮ್ಮಿಕೊಂಡಿರುವ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯ ಸಮೀಕ್ಷೆಯಲ್ಲಿ ಕುಟುಂಬಗಳ ಸರ್ವೇ ಮುಕ್ತಾಯವಾಗಿದೆ. ಇದೀಗ ಕುಟುಂಬದಿಂದ ಹೊರಗುಳಿದವರ ವಿವರ ಸಂಗ್ರಹಿಸುತ್ತಿದ್ದು, ವಸತಿ ನಿಲಯಗಳಿಗೆ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಸೆ.22ರಿಂದ ಸಮೀಕ್ಷೆ ಆರಂಭವಾಗಿದೆ. ಆರಂಭದಲ್ಲಿ ಒಂದೆರಡು ದಿನ ತಾಂತ್ರಿಕ ಸಮಸ್ಯೆಗಳು ಹೊರತುಪಡಿಸಿ ಸುಗಮವಾಗಿ ಸಾಗಿದೆ. ಅ.6ರಂದು ಸಿಎಂ ಸಿದ್ದರಾಮಯ್ಯ ಆಗಮಿಸಿದ್ದರಿಂದ ಅಷ್ಟರಲ್ಲಿ ಸಮೀಕ್ಷೆ ಮುಗಿಸುವ ಗುರಿ ಹೊಂದಿದ್ದ ಜಿಲ್ಲಾಡಳಿತ ಹಗಲಿರುಳು ಶ್ರಮಿಸಿ ಅಷ್ಟೊರಳಗೆ ಸರ್ವೇ ಮುಗಿಸಿದೆ. ಈ ಮೊದಲು ಕುಟುಂಬಗಳನ್ನು ಆಧರಿಸಿ ಬ್ಲಾಕ್​ ರಚಿಸಿದ ಆಯೋಗ ಓರ್ವ ಗಣತಿದಾರನಿಗೆ 150 ಕುಟುಂಬಗಳ ಟಾರ್ಗೇಟ್​ ನಿಗದಿಪಡಿಸಿದೆ. ಅದರಂತೆ ಜಿಲ್ಲೆಯಲ್ಲಿ 3,55,361 ಮನೆಗಳಿದ್ದು, 2,969 ಗಣತಿದಾರರನ್ನು ನಿಯೋಜಿಸಿ ಗಣತಿ ನಡೆಸಲಾಗಿದೆ. ಈಗಾಗಲೇ ಕುಟುಂಬ ಆಧಾರಿತ ಸಮೀಕ್ಷೆಯಲ್ಲಿ ಕೊಪ್ಪಳ ಶೇ.110ರಷ್ಟು ಸಾಧನೆ ಮಾಡಿದೆ. ಎಲ್ಲ ತಾಲೂಕುಗಳಲ್ಲಿ ಗಣತಿದಾರರು ತಮಗೆ ನೀಡಿದ ಟಾರ್ಗೇಟ್​ನಂತೆ ಮನೆಗೆ ಹೋಗಿ ಬಂದಿದ್ದಾರೆ.

ಆದರೆ, ಕೆಲ ಮನೆಗಳು ಲಾಕ್​ ಆಗಿದ್ದರೆ, ಇನ್ನು ಕೆಲ ಮನೆಗಳಲ್ಲಿ ಸದಸ್ಯರ ಪೈಕಿ ಕೆಲವರು ಮಾತ್ರ ಸಮೀಕ್ಷೆಯಲ್ಲಿ ಭಾಗಿಯಾಗಿ ಮಾಹಿತಿ ನೀಡಿದ್ದಾರೆ. ತಂದೆ-ತಾಯಿ ಒಂದು ಕಡೆ ವಾಸವಾಗಿದ್ದರೆ, ಇತರ ಸದಸ್ಯರು ಬೇರೆಡೆ ಇದ್ದಾರೆ. ಉದ್ಯೋಗ ಅರಸಿ ಬೇರೆಡೆ ಇರುವವರು, ಕೂಲಿ ಕೆಲಸಕ್ಕೆ ತೆರಳಿದವರು, ಶಿಕ್ಷಣ ಸೇರಿ ಇನ್ನಿತರ ಕಾರಣಗಳಿಗೆ ಮೂಲ ಮನೆಯಿಂದ ಬೇರೆಡೆ ಇರುವವರು ಸಮೀಕ್ಷೆಯಿಂದ ಹೊರಗುಳಿದಿದ್ದಾರೆ. ಇದರಿಂದ ಗುರಿ ಅನುಸಾರ ಸರ್ವೇ ಮುಗಿದರೂ ಮಾಹಿತಿ ಪೂರ್ಣ ಪ್ರಮಾಣದಲ್ಲಿ ದೊರೆತಿಲ್ಲ. ಹೀಗಾಗಿ ಕುಟುಂಬಗಳ ಬದಲು ಎರಡನೇ ಹಂತದಲ್ಲಿ ಜನಗಣತಿ ಅನುಸಾರ ವಿವರ ಕಲೆ ಹಾಕಲು ಸರ್ಕಾರ ಮುಂದಾಗಿದೆ.

ಆಯೋಗ ಕೊಪ್ಪಳದಲ್ಲಿ 15,97,413ರಷ್ಟು ಜನಸಂಖ್ಯೆ ಇದ್ದು, ಅವರೆಲ್ಲ ವಿವರ ನೀಡುವಂತೆ ಜಿಲ್ಲಾಡಳಿತ, ಗಣಿತಿದಾರರಿಗೆ ಸೂಚಿಸಿದೆ. ಈ ಪೈಕಿ ಸೋಮವಾರ ಬೆಳಗಿನ ಅವಧಿ ವೇಳೆಗೆ 13,91,839 (ಶೇ.87.13) ಜನರ ವಿವರ ಸಂಗ್ರಹವಾಗಿದೆ. ಬಾಕಿ ಜನರ ವಿವರ ಕಲೆಹಾಕಬೇಕಿದೆ. ಬಾಕಿ ಜನಸಂಖ್ಯೆಯಲ್ಲಿ ಗೊಂದಲ ಸೃಷ್ಟಿಯಾಗಿದೆ. ಅಸಲಿಗೆ ಯಾವ ತಾಲೂಕು, ಗ್ರಾಮ, ನಗರ, ಪಟ್ಟಣದಲ್ಲಿ ಎಷ್ಟು ಜನ ಗಣತಿಯಲ್ಲಿ ಭಾಗಿಯಾಗಿಲ್ಲ ಎಂಬ ನಿಖರ ವಿವರ ಹುಡುಕುವುದು ಕಷ್ಟವಾಗುತ್ತಿದೆ. ಗಣತಿದಾರರು ಯಾರನ್ನು ಪ್ರಶ್ನಿಸಬೇಕೆಂದು ಪೇಚಾಡುತ್ತಿದ್ದಾರೆ.

ಮಕ್ಕಳ ವಿವಿರ ಸಂಗ್ರಹ

ಸಮಾಜ ಕಲ್ಯಾಣ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ಶಿಕ್ಷಣ ಇಲಾಖೆ ಅಡಿ ಹಲವು ವಸತಿ ನಿಲಯಗಳಿವೆ. ಲಾಂತರ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಎಲ್ಲ ಮಕ್ಕಳ ವಿವರ ಸಮೀಕ್ಷೆಯಲ್ಲಿ ಸೇರಿದೆಯಾ ಇಲ್ಲವೆಂದು ಪರೀಸಲು ಅಧಿಕಾರಿಗಳು ಮುಂದಾಗಿದ್ದಾರೆ. ಹೀಗಾಗಿ ಎಲ್ಲ ಇಲಾಖೆಗಳ ಮೆಟ್ರಿಕ್​ ಪೂರ್ವ ಹಾಗೂ ಮೆಟ್ರಿಕ್​ ನಂತರದ ವಸತಿ ನಿಲಯಗಳಿಗೆ ಭೇಟಿ ನೀಡಿ ಸಮೀಕ್ಷೆಯಲ್ಲಿ ಮನೆಯವರು ವಿವರ ನೀಡಿದ್ದಾರಾ ? ನೀಡದಿದ್ದರೆ ನೀಡುವಂತೆ ಮನವಿ ಮಾಡಲಾಗುತ್ತಿದೆ. ಎಷ್ಟು ಮಕ್ಕಳು ಸರ್ವೇಯಿಂದ ಹೊರಗುಳಿದಿದ್ದಾರೆ ? ಅವರ ಸಂಖ್ಯೆ, ಊರು ಇನ್ನಿತರ ಮಾಹಿತಿ ಕಲೆ ಹಾಕುತ್ತಿದ್ದಾರೆ. ವಿದ್ಯಾರ್ಥಿಗಳ ಸಂಖ್ಯೆ ಅನುಸಾರ ಗಣತಿದಾರರನ್ನು ನಿಯೋಜಿಸಿ ಮಾಹಿತಿ ಕಲೆ ಹಾಕಲು ಮುಂದಾಗಿದ್ದಾರೆ.

ಸವಾಲಿನ ಕೆಲಸ

ಗ್ರಾಮೀಣ ಭಾಗದಲ್ಲಿ ಕೆಲ ಮನೆಗಳು ಡೋರ್​ ಲಾಕ್​ ಆಗಿದ್ದರೆ, ನಗರ ಪ್ರದೇಶದಲ್ಲಿ ಸ್ವಂತ ಮನೆಗಳ ಜತೆಗೆ ಬಾಡಿಗೆ ಮನೆಗಳು ಅಧಿಕ ಇವೆ. ಕೆಲ ಬಾಡಿಗೆದಾರರು ತಮ್ಮ ಮೂಲ ಕುಟುಂಬದಲ್ಲಿ ವಿವಿರ ದಾಖಲಿಸಿದರೆ, ಇನ್ನು ಕೆಲವರು ತಾವು ಇರುವಲ್ಲಿಯೇ ಮಾಹಿತಿ ನೀಡಿದ್ದಾರೆ. ಆಧಾರ್​, ಎಪಿಕ್​ ಕಾರ್ಡ್​, ಪಡಿತರ ಚೀಟಿ ಮಾನದಂಡವಾಗಿಸಿ ಸಮೀಕ್ಷೆ ಕೈಗೊಳ್ಳಲಾಗಿದೆ. ಹೀಗಾಗಿ ಯಾರ ವಿವರ ಸಂಗ್ರಹವಾಗಿದೆ, ಆಗದವರು ಯಾರು ಎಂದು ಪತ್ತೆ ಹಚ್ಚುವುದು ಸವಾಲಿನ ಕೆಲಸವೇ ಸರಿ.