ಕೊಪ್ಪಳ: ವಕ್ಫ್ ತಿದ್ದುಪಡಿ ಮಸೂದೆ ರದ್ದುಪಡಿಸುವಂತೆ ಒತ್ತಾಯಿಸಿ ಕರ್ನಾಟಕ ಮುಸ್ಲಿಮ್ ಜಮಾಅತ್ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಶುಕ್ರವಾರ ಎಡಿಸಿ ಸಿದ್ರಾಮೇಶ್ವರಗೆ ಮನವಿ ಸಲ್ಲಿಸಿದರು.
ವಕ್ಫ್ ತಿದ್ದುಪಡಿ ಮಸೂದೆ&2024 ವಿರೋಧಿಸಿ ಐದು ಕೋಟಿಗೂ ಹೆಚ್ಚು ಮುಸ್ಲಿಮರು ಜಂಟಿ ಸಂಸದೀಯ ಸಮಿತಿಗೆ (ಜೆಪಿಸಿ) ಇಮೇಲ್ ಮಾಡಿದ್ದಾರೆ. ಮುಸ್ಲಿಮ್ ಪೂರ್ವಜರು ಅಲ್ಲಾಹನ ಹೆಸರಿನಲ್ಲಿ ಇಡೀ ಬಡ ಮುಸ್ಲಿಮ್ ಜನರಿಗೆ ಉಪಯೋಗವಾಗಲು ಆಸ್ತಿ ದಾನ ಮಾಡಿದ್ದಾರೆ. ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ, ವಿವಿಧ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಮುಸ್ಲಿಮ್ ಸಂಘಟನೆಗಳು ಮತ್ತು ಪ್ರಮುಖ ಮುಸ್ಲಿಮ್ ವ್ಯಕ್ತಿಗಳು ಜೆಪಿಸಿ ಮುಂದೆ ಮಸೂದೆಯ ಪ್ರತಿಯೊಂದು ಅಂಶದ ಬಗ್ಗೆ ಬಲವಾದ ವಾದಗಳನ್ನು ಮಂಡಿಸಿದ್ದಾರೆ. ಲಿಖಿತ ದಾಖಲೆಗಳನ್ನು ಸಲ್ಲಿಸಿದ್ದಾರೆ. ತಿದ್ದುಪಡಿ ಮಸೂದೆ ಸಂಪೂರ್ಣ ತಿರಸ್ಕರಿಸಿದ್ದಾರೆಂದು ತಿಳಿಸಿದರು.
ಕೇಂದ್ರ ಸರ್ಕಾರ ತನ್ನ ನಿಲುವು ಬದಲಿಸಿಲ್ಲ. ಬದಲಿಗೆ ಇನ್ನಷ್ಟು ವಿವಾದಾತ್ಮಕಗೊಳಿಸಿದೆ. ಯಾವುದೇ ಮಸೂದೆ ಮಂಡನೆಗೂ ಮುನ್ನ ಸಾಧಕ, ಬಾಧಕ ಯೋಚಿಸಬೇಕು. ಕೇಂದ್ರ ಸರ್ವಾಧಿಕಾರಿ ನಡೆ ಅನುಸರಿಸುತ್ತಿದೆ. ಹಿಂದೆ ರೈತರೊಂದಿಗೆ ಯಾವುದೇ ಸಮಾಲೋಚನೆ ನಡೆಸದೇ ಮೂರು ಕೃಷಿ ಕಾಯ್ದೆ ಜಾರಿ ಮಾಡಿತ್ತು. ಔಪಚಾರಿಕತೆಗೆ ಸಮಿತಿ ರಚಿಸಿ ಕಠಿಣಗೊಳಿಸಿದೆ. ತಕ್ಷಣ ಮಸೂದೆ ಹಿಂಪಡೆಯಬೇಕು. ಇಲ್ಲದಿದ್ದರೆ ಹೋರಾಟ ಮಾಡಲಾಗುವುದೆಂದರು.
ಕರ್ನಾಟಕ ಮುಸ್ಲಿಮ್ ಜಮಾಅತ್ ಜಿಲ್ಲಾ ಸಂಚಾಲಕರಾದ ಮೌಲಾನಾ ಖಾರಿ ಮೊಹಮ್ಮದ್ ಅಬುಲ್ ಹಸನ್ ಖಾಝಿ, ಹಾಫೀಝ್ ಮೊಹಮ್ಮದ್ ಮೋಹಿಯೋದ್ದೀನ್ ಬಡೆಘರ, ಎಸ್.ಎ.ಗಫಾರ್, ಮಖಬೂಲ್ ರಾಯಚೂರು, ಸೈಯ್ಯದ್ ಸಲಿಮುದ್ದೀನ್ ಅಲ್ವಿ ಇತರರಿದ್ದರು.