ಕೊಪ್ಪಳ: ಇಂದು ಯುವಕರು ಅನೇಕ ದುಶ್ಚಟಕ್ಕೆ ಬಲಿಯಾಗುತ್ತಿರುವುದು ದುರಂತ. ವ್ಯಸನಮುಕ್ತರಾಗಿ ಉತ್ತಮ ಬದುಕು ಕಟ್ಟಿಕೊಳ್ಳಬೇಕೆಂದು ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಅವರು ಸಲಹೆ ನೀಡಿದರು.
ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ನಲ್ಲಿ ಜಿಲ್ಲಾಡಳಿತ, ವಾರ್ತಾ ಇಲಾಖೆಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಮಹಾಂತ ಶಿವಯೋಗಿಗಳು ಮಾದಕ ವಸ್ತುಗಳ ವಿರುದ್ಧ ದೇಶಾದ್ಯಂತ ಜಾಗೃತಿ ಮೂಡಿಸಿದ್ದಾರೆ. ಜೋಳಿಗೆ ಯಾತ್ರೆ ಮೂಲಕ ಜನರ ಬಳಿ ತೆರಳಿ ಅವರ ದುಶ್ಚಟ ದಾನ ಮಾಡುವಂತೆ ಮನಪರಿವರ್ತಿಸುವ ಕೆಲಸ ಮಾಡಿದರು. ಅನೇಕರು ಕೆಟ್ಟ ಚಟ ತೊರೆಯುವಂತೆ ಮಾಡಿದರು. ಈ ಮೂಲಕ ವ್ಯಸನಮುಕ್ತ ಆಂದೋಲನದ ಹರಿಕಾರರಾಗಿದ್ದಾರೆ. ಅವರ ಜನ್ಮ ದಿನವನ್ನು ವ್ಯಸನಮುಕ್ತ ದಿನವಾಗಿ ಆಚರಿಸಲಾಗುತ್ತಿದೆ ಎಂದರು.
ಉಪನ್ಯಾಸಕ ಡಾ.ಪ್ರಭುರಾಜ ನಾಯಕ ಮಾತನಾಡಿ, ಡಾ.ಮಹಾಂತ ಶಿವಯೋಗಿಗಳು ನಾಡಿನ ದೊಡ್ಡ ಸಂತ. ಸಮಾಜ ಸುಧಾರಕ. ಹಲವಾರು ಸಮಸ್ಯೆಗಳನ್ನು ಹುಡುಕಿ ಅವುಗಳಿಗೆ ಪರಿಹಾರ ನೀಡಿದರು. ಜಾತಿ ವ್ಯವಸ್ಥೆ, ಅಸ್ಪ-ೃಶ್ಯತೆ ನಿವಾರಣೆ, ಮಾದಕ ಸೇವನೆ ಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದರು. ದುಶ್ಚಟಕ್ಕೆ ಬಲಿಯಾದ ವ್ಯಕ್ತಿ, ಆತನ ಕುಟುಂಬದ ಸಂಕಷ್ಟ ಕಂಡು ಜನರನ್ನು ವ್ಯಸನಮುಕ್ತರನ್ನಾಗಿಸಲು ಪಣ ತೊಟ್ಟರು ಎಂದು ತಿಳಿಸಿದರು.
ಮನೋವೈದ್ಯೆ ಡಾ.ಲಕ್ಷಿ$್ಮದೇವಿ ಪಾಟೀಲ್ ಮಾತನಾಡಿದರು. ಡಿಡಿಪಿಯು ಜಗದೀಶ ಜಿ.ಎಚ್. ವ್ಯಸನಮುಕ್ತ ಪ್ರತಿಜ್ಞಾ ವಿಧಿ ಬೋಧಿಸಿದರು. ಜಿಲ್ಲಾ ತರಬೇತಿ ಸಂಸ್ಥೆ ಪ್ರಾಚಾರ್ಯ ಕೃಷ್ಣಮೂರ್ತಿ ದೇಸಾಯಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಉಪನಿರ್ದೇಶಕ ಪಿ.ವೈ.ಶೆಟ್ಟೆಪ್ಪನವರ, ವಾರ್ತಾಧಿಕಾರಿ ಡಾ.ಜಿ.ಸುರೇಶ, ಅಂಬೇಡ್ಕರ್ ಅಭಿವೃದ್ಧಿ ನಿಗಮ ಜಿಲ್ಲಾ ವ್ಯವಸ್ಥಾಪಕಿ ಪುಷ್ಪಲತಾ, ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನ ಅಧಿಕಾರಿ ಡಾ.ಪ್ರಕಾಶ ಎಚ್., ಜಿಲ್ಲಾ ದೈಹಿಕ ಶಿಕ್ಷಣ ನಿರ್ದೇಶಕ ಎ.ಬಸವರಾಜ ಇತರರಿದ್ದರು.