ಕೊಪ್ಪಳ: ಯುವಕರು ಕ್ರೀಡಾ ಮನೋಭಾವದಿಂದ ಸ್ಪರ್ದೆಯಲ್ಲಿ ಪಾಲ್ಗೊಳ್ಳಬೇಕು. ಕ್ರೀಡೆಯಿಂದ ಮನಸ್ಸು ಹಾಗೂ ದೇಹ ಸದೃಡವಾಗಲಿದೆ ಎಂದು ಮಾಜಿ ತಾಪಂ ಸದಸ್ಯ ವೀರೇಶ ಸಜ್ಜನ ತಿಳಿಸಿದರು.
ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಬೆಟಗೇರಿ ಪ್ರಿಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಶುಕ್ರವಾರ ಮಾತನಾಡಿದರು. ನಂತರ ನಮ್ಮ ಕೆರೆ ನಮ್ಮೂರ ಕೆರೆ ನಿಮಾರ್ಣದ ವ್ಯವಸ್ಥಾಪಕ ಬಸವರಾಜ ನಾಗರಡ್ಡಿ, ಹಿರಿಯ ಕ್ರಿಕೆಟ್ ಆಟಗಾರ ಏಳುಕೋಟೇಶ, ಬಸವರಾಜ ಬಾರಕೇರ ಅವರನ್ನು ಸನ್ಮಾನಿಸಲಾಯಿತು.
ಯುವಕರು ನಮ್ಮವರು ಎಂಬ ಕ್ರೀಡಾ ಮನೋಭಾವದಿಂದ ಆಟವನ್ನು ಆಡಿ ಹಾಗೂ ಕ್ರೀಡಾಕೂಟದಿಂದ ಸೌಹಾರ್ದತೆ, ಐಕ್ಯತೆ ಬೆಳೆಯಲಿದೆ. ಯುವಕರು ಸೋಲು ಗೆಲುವನ್ನು ಲೆಕ್ಕಿಸದೇ ಉತ್ತಮವಾಗಿ ಆಡಿ, ಕ್ರೀಡೆಯಿಂದ ಯುವಕರಲ್ಲಿ ಒಗ್ಗಟ್ಟಿನ ಭಾವನೆ ಮೂಡಲಿದೆ ಎಂದರು.
ಶಿಕ್ಷಣ ಪ್ರೇಮಿ ನಾರಾಯಣಪ್ಪ ಚಿಂಚಲಿ ಮಾತನಾಡಿ, ಕ್ರೀಡೆಯಿಂದ ಯುವಕರಲ್ಲಿ ನಾಯಕತ್ವ ಗುಣ ಹಾಗೂ ಕ್ರೀಡಾ ಮನೋಭಾವ ಬೆಳೆಯಲು ಸಹಕಾರಿಯಾಗಲಿದೆ. ಜೀವನದಲ್ಲಿ ಸಾಧನೆ ಮಾಡಲು ಶಿಕ್ಷಣ ಎಷ್ಟು ಮುಖ್ಯವೋ ಅದೇ ರೀತಿ ರೋಗಮುಕ್ತ ಹಾಗೂ ಉಲ್ಲಾಸಮಯ ಜೀವನ ನಡೆಸಲು ಕ್ರೀಡೆಗಳು ಮುಖ್ಯವಾಗಲಿವೆ. ಯುವಕರು ಇಂತಹ ವೇದಿಕೆಗಳನ್ನು ಬಳಸಿಕೊಂಡು ತಮ್ಮ ಕ್ರೀಡಾ ಸಾಮರ್ಥ್ಯವನ್ನು ಪ್ರದರ್ಶಿಸಬೇಕು ಎಂದರು.
ಕ್ರಿಕೆಟ್ ಪ್ರಿಮಿಯರ್ ಲೀಗ ಮಾಲಿಕರಾದ ಶ್ರೀಕಾಂತ ಭಾವಿ, ಬಸವರಾಜ ಬಾರಕೇರ, ಮೇಘರಾಜ, ಪ್ರದಿಪ ಅಳವಂಡಿ, ಶರಣಪ್ಪ ಮಡಿವಾಳ, ಯಂಕಣ್ಣ ಕೊರಣ್ಣವರ, ಯಂಕಣ್ಣ ನಾಗರಡ್ಡಿ, ಶಂಕರ ಮಾಳೆಕೊಪ್ಪ, ಬಸವರಾಜ ನಾಗರಡ್ಡಿ, ಸುರೇಶ ಸಜ್ಜನ, ರಾಜೇಶ ಅಂಗಡಿ, ವಿಜಯ ಯತ್ನಳ್ಳಿ, ಬಸವರಾಜ, ನವೀನ ಮಾದಿನೂರ, ಗುಡದಪ್ಪ ಹಾಗೂ ಗ್ರಾಮಸ್ಥರು ಇದ್ದರು.