ಕೊಪ್ಪಳ: ಜಿಲ್ಲೆಯ ಐತಿಹಾಸಿಕ ಪ್ರವಾಸಿ ತಾಣಗಳ ಬಳಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ನಿಗದಿಪಡಿಸಿದ ಕಾಲಮಿತಿಯಲ್ಲಿ ಮಾಡಿ ಮುಗಿಸಬೇಕೆಂದು ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಸೂಚಿಸಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಗುರುವಾರ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು.
ಅಂಜನಾದ್ರಿ ಬೆಟ್ಟ, ಹುಲಿಗೆಮ್ಮ ದೇವಿ ದೇವಾಲಯ ಸಮಗ್ರ ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ನೀಡಿ. ಅವಧಿಯೊಳಗೆ ಕೆಲಸ ಮುಗಿಸಿ. ಉಳಿದಂತೆ ಇತರ ಪ್ರವಾಸಿ ತಾಣಗಳ ಬಳಿ ಕೈಗೊಂಡ ಕಾಮಗಾರಿಗಳನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಿ. ಕೆಲಸದಲ್ಲಿ ಸ್ಪಷ್ಟತೆ, ನಿಖರತೆ ಅಗತ್ಯ. ಕೊಪ್ಪಳ ಕೋಟೆ ಆವರಣದಲ್ಲಿ ವಸ್ತು ಸಂಗ್ರಹಾಲಯ ಸ್ಥಾಪಿಸಲಾಗುವುದು. ಮುಂದೆ ಸಾಕಷ್ಟು ಪ್ರವಾಸಿಗರು ಬರುವ ನಿರೀೆ ಇದೆ. ವೆಂಕಟಪ್ಪ ಬಾವಿ ಬಳಿ ಗಿಡಮರಗಳು ಬೆಳೆದಿದ್ದು, ಸ್ವಚ್ಛಗೊಳಿಸಿ. ಪ್ರವಾಸಿಗರ ವೀಕ್ಷಣೆಗೆ ಅವಕಾಶ ಮಾಡಿಕೊಡಿ. ಹಿರೇ ಬೆಣಕಲ್ ಮೊರೆರ ಬೆಟ್ಟ ಸೇರಿ ಪ್ರವಾಸಿತಾಣಗಳ ಅಭಿವೃದ್ಧಿ ಅಗತ್ಯವಿದ್ದಲ್ಲಿ ಮಾಹಿತಿ ನೀಡಿ ಎಂದರು.
ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ ಮಾತನಾಡಿ, ಪರಿಶಿಷ್ಟ ಜಾತಿ, ಪಪಂ ಸಣ್ಣ ಉದ್ದಿಮೆದಾರರಿಗೆ ತರಬೇತಿ ನೀಡಲಾಗುವುದು. ಉದ್ಯೋಗವಕಾಶ ಬಗ್ಗೆ ಕೌಶಲಾಭಿವೃದ್ಧಿ ತರಬೇತಿ ನೀಡಲಾಗುವುದು. ಜತೆಗೆ ಮೊಬೈಲ್ ಕ್ಯಾಂಟೀನ್ ಆರಂಭಕ್ಕೆ ಸಹಾಯಧನ ನೀಡಲಾಗುವುದು. ಈ ಮೂಲಕ ಪ್ರವಾಸಿ ತಾಣಗಳಲ್ಲಿ ಸೌಕರ್ಯ ಕಲ್ಪಿಸಿ ಉದ್ಯೋಗವಕಾಶದೊಂದಿಗೆ ಪ್ರವಾಸೋದ್ಯಮ ಬೆಳವಣಿಗೆಗೆ ಯೋಜಿಸಲಾಗಿದೆ. ಈಗಾಗಲೇ ಪಜಾಯವರಿಂದ 11, ಪಪಂನವರಿಂದ 7 ಅರ್ಜಿ ಸಲ್ಲಿಕೆಯಾಗಿವೆ ಎಂದು ಮಾಹಿತಿ ನೀಡಿದರು.
ಸಹಾಯಕ ಆಯುಕ್ತ ಮಹೇಶ್ ಮಾಲಗಿತ್ತಿ, ಜಿಪಂ ಯೋಜನಾ ನಿರ್ದೆಶಕ ಪ್ರಕಾಶ ವಡ್ಡರ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೆಶಕ ಅಜ್ಜಪ್ಪ ಸೊಗಲದ, ಎನ್.ಐ.ಸಿ ಅಧಿಕಾರಿ ಬಸವರಾಜ, ಕೊಪ್ಪಳ ನಗರಸಭೆ ಆಯುಕ್ತ ಗಣಪತಿ ಪಾಟೀಲ್ ಇದ್ದರು.