ಜಿಲ್ಲೆ

ಸೇನಾ ರ್ಯಾಲಿಗೆ ಅಗತ್ಯ ಸಹಕಾರ, ಎಡಿಸಿ ಸಿದ್ರಾಮೇಶ್ವರ ಹೇಳಿಕೆ

Kopala - Raveendra V K

ಕೊಪ್ಪಳ: ಸೇನೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇಮಕಾತಿ ರ್ಯಾಲಿ ನ.26ರಿಂದ ಡಿಸೆಂಬರ್​ 8ವರೆಗೆ ಕೊಪ್ಪಳದಲ್ಲಿ ನಡೆಯಲಿದ್ದು ಜಿಲ್ಲಾಡಳಿತದಿಂದ ಅಗತ್ಯ ಸಹಕಾರ ನೀಡಲಾಗುವುದೆಂದು ಎಡಿಸಿ ಸಿದ್ರಾಮೇಶ್ವರ ಹೇಳಿದರು.

ನಗಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

ಜಿಲ್ಲಾ ಕ್ರೀಡಾಂಗಣದಲ್ಲಿ ನಡೆವ ರ್ಯಾಲಿಗೆ ಉತ್ತರ ಕರ್ನಾಟಕ ಭಾಗದ ಬೆಳಗಾವಿ, ಕಲಬುರ್ಗಿ, ಯಾದಗಿರಿ, ಬೀದರ್​, ರಾಯಚೂರು ಮತ್ತು ಜಿಲ್ಲೆಯ ಅಭ್ಯರ್ಥಿಗಳು ಭಾಗವಹಿಸಲಿದ್ದಾರೆ. ಯಶಸ್ವಿಯಾಗಿ ನಿರ್ವಹಿಸಲು ವೇದಿಕೆ, ಭದ್ರತೆ, ಮೂಲ ಸೌಕರ್ಯ, ಸಾರಿಗೆ, ಆಹಾರ, ಮಾಧ್ಯಮ, ವಿದ್ಯುತ್​, ದಾಖಲೆ ಪರಿಶೀಲನೆ ಸಮಿತಿ ರಚಿಸಲಾಗಿದೆ. ಎಲ್ಲ ಸಮಿತಿಗಳು ಸಮನ್ವಯತೆಯಿಂದ ಕೆಲಸ ಮಾಡಿ. ಅಭ್ಯರ್ಥಿಗಳಿಗೆ ಕುಡಿವ ನೀರು, ತಾತ್ಕಾಲಿಕ ಶೌಚಗೃಹ, ಬಳಕೆ ನೀರು ಪೂರೈಸಿ. ಸ್ವಚ್ಛತೆ ಕಾಪಾಡಿ. ವಸತಿ, ಊಟ, ಆರೋಗ್ಯ ಸೇವೆ, ತುರ್ತು ಸೇವೆಗಳನ್ನು ಒದಗಿಸಿ. ರಕ್ಷಣೆ, ಜನರ ನಿಯಂತ್ರಣಕ್ಕೆ ಪೊಲೀಸ್​ ಬಂದೋಬಸ್ತ್​ ಕಲ್ಪಿಸುವಂತೆ ಸೂಚಿಸಿದರು.

ಬೆಳಗಾವಿ ಸೇನಾ ನೇಮಕಾತಿ ನಿರ್ದೇಶಕ ಕರ್ನಲ್​ ಎ.ಕೆ.ಉಪಾಧ್ಯಾಯ ಮಾತನಾಡಿ, ನ.26ರಿಂದ ಡಿ.8ವರೆಗೆ ರ್ಯಾಲಿ ನಡೆಯಲಿದೆ. ಜಿಲ್ಲಾಡಳಿತ ಅಗತ್ಯ ಸಹಕಾರ ನೀಡಬೇಕು. ಪಾರದರ್ಶಕತೆ ಕಾಯ್ದುಕೊಳ್ಳಲು ಸಿಸಿಟಿವಿ ಕ್ಯಾಮೆರಾ ಅಳವಡಿಸಿ. ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆಗೆ ಕಂದಾಯ, ಶಿಕ್ಷಣಾಧಿಕಾರಿಗಳನ್ನು ನಿಯೋಜಿಸಿ. ಸುಸೂತ್ರವಾಗಿ ರ್ಯಾಲಿ ನಡೆದಲ್ಲಿ ಜಿಲ್ಲಾಡಳಿತ, ನಮಗೂ ಒಳ್ಳೆಯ ಹೆಸರು ಬರಲಿದೆ ಎಂದರು.

ಎಎಸ್ಪಿ ಹೇಮಂತ್​ ಕುಮಾರ್​, ಎಸಿ ಕ್ಯಾ.ಮಹೇಶ ಮಾಲಗಿತ್ತಿ, ಡಿಯುಡಿಸಿ ಪಿಡಿ ರೇಷ್ಮಾ ಹಾನಗಲ್​, ಬೆಳಗಾವಿ ಸೇನಾ ನೇಮಕಾತಿ ಕಚೇರಿ ಸುಬೇದಾರ ಮೇಜರ್​ ದಿನೇಶ್​ ರಾಮ್​ ಲೋಹಿಯಾ, ನೈಬ್​ ಸುಬೇದಾರ್​ ಮಾಲಕೀತ್​ ಸಿಂಗ್​, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ನಾಗಮಣಿ ಹೊಸಮನಿ, ನಿರ್ಮಿತಿ ಕೇಂದ್ರ ಪಿಡಿ ಶಶಿಧರ ಪಾಟೀಲ್​ ಇತರರಿದ್ದರು.