ಬಕ್ರೀದ್​ ಅಂಗವಾಗಿ ಕೊಪ್ಪಳದಲ್ಲಿ ಗುರುವಾರ ಎಡಿಸಿ ಸಾವಿತ್ರಿ ಕಡಿ ಅಧ್ಯಕ್ಷತೆಯಲ್ಲಿ ಶಾಂತಿ ಸಭೆ ನಡೆಯಿತು. ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ.ಪಿ.ಎಂ.ಮಲ್ಲಯ್ಯ, ಎಎಸ್ಪಿ ಹೇಮಂತ ಕುಮಾರ್​, ಡಿಯುಡಿಸಿ ಪಿಡಿ ರೇಷ್ಮಾ ಹಾನಗಲ್​, ಡಿವೈಎಸ್ಪಿ ಮುತ್ತಣ್ಣ ಸರವಗೋಳ, ಕನಕಗಿರಿ ತಹಸೀಲ್ದಾರ್​ ವಿಶ್ವನಾಥ ಮುರಡಿ ಇದ್ದರು. 
ಜಿಲ್ಲೆ

ಶಾಂತಿ ಪಾಲನೆಗೆ ಸಹಕರಿಸಿ:ಎಡಿಸಿ ಸಾವಿತ್ರಿ ಕಡಿ

ಕೊಪ್ಪಳ: ಇದೇ 17ರಂದು ಬಕ್ರೀದ್​ ಆಚರಣೆಯಿದೆ. ಪ್ರಾಣಿವಧೆ, ಜಾನುವಾರು ಸಾಗಣೆ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಕಾಯ್ದೆ ಅನ್ವಯ ಅಗತ್ಯ ಕ್ರಮವಹಿಸಿ ಎಂದು ಎಡಿಸಿ ಸಾವಿತ್ರಿ ಕಡಿ ಹೇಳಿದರು.

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದರು.

ಅಗತ್ಯ ಸ್ಥಳಗಳಲ್ಲಿ ಚೆಕ್​ಪೋಸ್ಟ್​ ತೆರೆಯಿರಿ. ಪೊಲೀಸ್​ ಹಾಗೂ ಪಶುಪಾಲನಾ ಇಲಾಖೆ ಅಧಿಕಾರಿ, ಸಿಬ್ಬಂದಿ ನಿಯೋಜಿಸಿ. ಕೊಪ್ಪಳದಲ್ಲಿ ಅಧಿಕೃತ ವಧಾಗಾರವಿದೆ. ಅಲ್ಲಿಯೇ ಮಾತ್ರ ವಧೆ ನಡೆಯಲಿ. ಗ್ರಾಮ ಹಾಗೂ ತಾಲೂಕು ಕೇಂದ್ರಗಳಲ್ಲಿ ಸೂಚಿತ ಸ್ಥಳಗಳಲ್ಲಿ ಮಾತ್ರ ವಧೆ ನಡೆಸಿ. ಅನಧಿಕೃತವಾಗಿ ನಡೆಸುವಂತಿಲ್ಲ. ಯಾರ ಧಾರ್ಮಿಕ ಭಾವನೆಗಳಿಗೂ ಧಕ್ಕೆಯಾಗದಂತೆ ಪರಸ್ಪರ ಸೌಹಾರ್ದತೆಯಿಂದ ಹಬ್ಬ ಆಚರಿಸಿ. ಸಾರ್ವಜನಿಕರು ಅಧಿಕಾರಿಗಳಿಗೆ ಸಹಕರಿಸಬೇಕು ಎಂದರು.

ಕರ್ನಾಟಕ ಜಾನುವಾರು ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ&-2020 ಅನ್ವಯ ಪ್ರಾಣಿಗಳ ಅಕ್ರಮ ಸಾಗಣೆ ನಿಯಮಬಾಹಿರ. ಎಲ್ಲ ವಯಸ್ಸಿನ ಆಕಳು, ಕರು, ಹೋರಿ, ಎತ್ತು ಅಲ್ಲದೆ 13 ವರ್ಷದೊಳಗಿನ ಎಮ್ಮೆ, ಕೋಣ, ಒಂಟೆಗಳನ್ನು ಹತ್ಯೆ ಮಾಡುವಂತಿಲ್ಲ. ಹಬ್ಬದ ಹೆಸರಲ್ಲಿ ಕಾಯ್ದೆ ಉಲ್ಲಂನೆ ಆಗದಂತೆ ನೋಡಿಕೊಳ್ಳಿ. ಸಂಬಂಧಿಸಿದ ಅಧಿಕಾರಿಗಳು ನಿಗಾವಹಿಸಿ. ಎಲ್ಲ ತಾಲೂಕು ಕೇಂದ್ರಗಳಲ್ಲಿ ಶಾಂತಿ ಸಭೆ ನಡೆಸಿ ಎಂದು ಸೂಚಿಸಿದರು.

ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ.ಪಿ.ಎಂ.ಮಲ್ಲಯ್ಯ ಮಾತನಾಡಿ, ಪ್ರಾಣಿ ಹಿಂಸೆ ಪ್ರತಿಬಂಧಕ ಕಾಯ್ದೆ-1960 ನಿಯಮ ವಿವರಿಸಿದರು. ಎಎಸ್ಪಿ ಹೇಮಂತ ಕುಮಾರ್​, ಡಿಯುಡಿಸಿ ಪಿಡಿ ರೇಷ್ಮಾ ಹಾನಗಲ್​, ಡಿವೈಎಸ್ಪಿ ಮುತ್ತಣ್ಣ ಸರವಗೋಳ, ಕನಕಗಿರಿ ತಹಸೀಲ್ದಾರ್​ ವಿಶ್ವನಾಥ ಮುರಡಿ ಇತರರಿದ್ದರು.