ಕೊಪ್ಪಳ: ಜಿಲ್ಲೆಗೆ ಜು.10ರಂದು ರಾಜ್ಯ ಮಾನವ ಹಕ್ಕುಗಳ ಆಯೋಗ ಅಧ್ಯಕ್ಷರು ಹಾಗೂ ಸದಸ್ಯರು ಭೇಟಿ ನೀಡಿ ಸಭೆ ನಡೆಸುವರು. ಎಲ್ಲ ಅಧಿಕಾರಿಗಳು ಸಭೆಗೆ ಅಗತ್ಯ ಮಾಹಿತಿಯೊಂದಿಗೆ ಹಾಜರಾಗುವಂತೆ ಎಡಿಸಿ ಸಾವಿತ್ರಿ ಕಡಿ ಸೂಚಿಸಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಅಂದು ಬಾಕಿ ಎಚ್ಆರ್ಸಿ ಪ್ರರಕಣಗಳ ವಿಚಾರಣೆ ಹಾಗೂ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಸಭೆಗೆ ಅಗತ್ಯ ಮಾಹಿತಿಯೊಂದಿಗೆ ಬನ್ನಿ. ಸರ್ಕಾರದ ಯೋಜನೆ ಜನರಿಗೆ ತಲುಪಿಸಿದ್ದು, ವಸತಿ, ದೇವದಾಸಿ ಪದ್ಧತಿ ನಿಮೂರ್ಲನೆ, ಪುನರ್ವಸತಿ ಕ್ರಮ, ಲೈಂಗಿಕ ಕಾರ್ಯಕರ್ತರು, ಲೈಂಗಿಕ ಅಲ್ಪಸಂಖ್ಯಾತರು, ಅಲ್ಪಸಂಖ್ಯಾತರು ಸೇರಿ ಇತರ ಜನರಿಗೆ ಕಲ್ಪಿಸಿದ ಸೌಲಭ್ಯಗಳ ಮಾಹಿತಿ ಇರಲಿ. ಬಾಕಿ ಇರುವ ಎಚ್ಆರ್ಸಿ ಪ್ರಕರಣಗಳಲ್ಲಿ ಕೈಗೊಂಡ ಕ್ರಮದ ವಿವರ ಇರಲಿ. ಪ್ರತಿನಿಧಿಯನ್ನು ಕಳುಹಿಸದೇ ಖುದ್ದಾಗಿ ಸಭೆಗೆ ಸಂಬಂಧಿಸಿದ ಅಧಿಕಾರಿಗಳೇ ಹಾಜರಾಗಿ ಎಂದು ತಾಕೀತು ಮಾಡಿದರು.
ಆಯೋಗದ ಅಧ್ಯಕ್ಷರ ತಂಡ ಜಿಲ್ಲಾ ಕಾರಾಗೃಹ, ವಸತಿ ನಿಲಯಗಳು, ಆಸ್ಪತ್ರೆಗಳಿಗೆ ಭೇಟಿ ನೀಡಲಿದೆ. ಯಾವುದೇ ಅವ್ಯವಸ್ಥೆ ಉಂಟಾಗದಂತೆ ಸಂಬಂಧಿಸಿದವರು ಮುಂಜಾಗ್ರತೆವಹಿಸಿ. ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳಲ್ಲಿ ಸಾರ್ವಜನಿಕರು ನೇರವಾಗಿ ಆಯೋಗಕ್ಕೆ ದೂರು ಸಲ್ಲಿಸಿದ್ದಲ್ಲಿ ಅಂತಹ ಪ್ರಕರಣಗಳ ವಿಚಾರಣೆಯನ್ನೂ ನಡೆಸಬಹುದು. ಎಲ್ಲ ಇಲಾಖೆಗಳವರು ಅಧಿಕೃತ ಮಾಹಿತಿಯೊಂದಿಗೆ ಬನ್ನಿ ಎಂದು ತಿಳಿಸಿದರು.
ಜಿಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಹೆಚ್ಚುವರಿ ಎಸ್ಪಿ ಹೇಮಂತ್ ಕುಮಾರ್, ಸಹಾಯಕ ಆಯುಕ್ತ ಕ್ಯಾ.ಮಹೇಶ ಮಾಲಗಿತ್ತಿ, ತಹಸೀಲ್ದಾರ ವಿಠ್ಠಲ್ ಚೌಗಲಾ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ರಾಜು ತಳವಾರ, ನಗರಸಭೆ ಪೌರಾಯುಕ್ತ ಗಣಪತಿ ಪಾಟೀಲ್ ಇತರರಿದ್ದರು.