ಕೊಪ್ಪಳ: ಬರುವ ಶನಿವಾರ (ಜೂ.7) ಬಕ್ರೀದ್ ಹಬ್ಬ ಆಚರಣೆ ಇದ್ದು ಜಿಲ್ಲೆಯಲ್ಲಿ ಜಾನುವಾರು ಅಕ್ರಮ ಸಾಗಣೆ, ವಧೆ ಆಗದಂತೆ ಕ್ರಮವಹಿಸಲು ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬಕ್ರೀದ್ ಅಂಗವಾಗಿ ಜಾನುವಾರು ಅಕ್ರಮ ಸಾಗಣೆ, ವಧೆ ನಿಯಂತ್ರಣ ಸಂಬಂಧ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಕರ್ನಾಟಕ ಜಾನುವಾರು ಹತ್ಯೆ ಪ್ರತಿಭಂದಕ ಕಾಯ್ದೆ ಮತ್ತು ಸಂರಕ್ಷಣೆ ಅಧಿನಿಯಮ-&2020ರ ಅನ್ವಯ ಗೋ ಹತ್ಯೆ ನಿಷೇಧಿಸಲಾಗಿದೆ. ಅಕ್ರಮವಾಗಿ ಪ್ರಾಣಿಗಳ ಸಾಗಣೆ ಮಾಡುವಂತಿಲ್ಲ. ಎಲ್ಲ ವಯಸ್ಸಿನ ಆಕಳು, ಆಕಳು ಕರು, ಹೋರಿ, 13 ವರ್ಷದೊಳಗಿನ ಎಮ್ಮೆ, ಕೋಣ ಹಾಗೂ ಉಚ್ಚ ನ್ಯಾಯಾಲಯದ ಆದೇಶದನ್ವಯ ಒಂಟೆ ಹತ್ಯೆ ಮಾಡುವಂತಿಲ್ಲ. ಬಕ್ರೀದ್ ಹಬ್ಬ ಅಂಗವಾಗಿ ಕಾನೂನು ಉಲ್ಲಂನೆಯಾಗದಂತೆ ನೋಡಿಕೊಳ್ಳಿ. ಪಶುಪಾಲನಾ ಇಲಾಖೆ ಪೊಲೀಸರನ್ನು ಒಳಗೊಂಡು ತಂಡ ರಚಿಸಿ. ಸೂಕ್ತ ನಿಗಾವಹಿಸಿ.
ಗುರುತಿಸಿ ಸ್ಥಳಗಳಲ್ಲಿ ಚೆಕ್ಪೋಸ್ಟ್ ಆರಂಭಿಸಿ. ಪಶುಪಾಲನಾ, ಪೊಲೀಸರನ್ನು ನಿಯೋಜಿಸಿ. ವಧೆಗೆ ವಿನಾಯಿತಿ ಇರುವ ಪ್ರಾಣಿಗಳನ್ನು ಹೊರತುಪಡಿಸಿ ಬಾಕಿ ಪ್ರಾಣಿಗಳ ವಧೆ ತಡೆಯಿರಿ. ಬಕ್ರೀದ್ ಹಬ್ಬ ಶಾಂತಿಯುತವಾಗಿ ಆಚರಿಸಲು ಎಲ್ಲರೂ ಸಹಕರಿಸಿ. ನಗರ, ಸ್ಥಳಿಯ ಸಂಸ್ಥೆಗಳು ಪ್ರಾಣಿ ವಧೆಗೆ ಪ್ರತ್ಯೇಕ ಸ್ಥಳ ನಿಗದಿಪಡಿಸಬೇಕು. ಪೊಲೀಸರು ಜೂ.6ರೊಳಗೆ ಜನಪ್ರತಿನಿಧಿಗಳು, ಮುಖಂಡರನ್ನು ಕರೆದು ಶಾಂತಿ ಸಭೆ ನಡೆಸುವಂತೆ ತಿಳಿಸಿದರು.
ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಡಾ.ಪಿ.ಎಂ.ಮಲ್ಲಯ್ಯ ಮಾತನಾಡಿ, ರೈತರು ಕೃಷಿ ಉದ್ದೇಶಕ್ಕೆ ಸ್ಥಳಿಯವಾಗಿ 15 ಕಿ.ಮೀ.ದೂರದವರೆಗೆ ಪರವಾನಗಿ ಇಲ್ಲದೆ ಎರಡು ಹಸು, ಎರಡು ಕರು ಕೊಂಡೊಯ್ಯಬಹುದು. ರಾತ್ರಿ ವೇಳೆ ಗೋ ಸಾಗಣೆ ನಿಷಿದ್ಧ. ಕೃಷಿ ಅಥವಾ ಪಶು ಸಂಗೋಪನೆ ಉದ್ದೇಶಕ್ಕೆ ಸಾಗಣೆ ಮಾಡುವಾಗ ಪರವಾನಗಿ ಪಡೆಯುವುದು ಕಡ್ಡಾಯ. ಮಾಲೀಕತ್ವ ದಾಖಲೆ, ಚಿಕಿತ್ಸಾ ಪೆಟ್ಟಿಗೆ ಹೊಂದಿರಬೇಕು ಎಂದರು.
ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್, ಡಿವೈಎಸ್ಪಿ ಮುತ್ತಣ್ಣ ಸರವಗೋಳ ಇತರರಿದ್ದರು.