ಜಿಲ್ಲೆ

ವಿಷ್ಣು ಸ್ಮಾರಕ ಮರು ನಿರ್ಮಿಸುವಂತೆ ಒತ್ತಾಯಿಸಿ ಅಭಿಮಾನಿಗಳ ಪ್ರತಿಭಟನೆ

Kopala - Raveendra V K

ಕೊಪ್ಪಳ: ಖ್ಯಾತ ನಟ ವಿಷ್ಣುವರ್ಧನ್​ ಅವರ ಸ್ಮಾರಕ ನೆಲಸಮ ಮಾಡಿದ್ದು ಸರಿಯಲ್ಲ. ತಕ್ಷಣ ಅದೇ ಸ್ಥಳದಲ್ಲಿ ಸ್ಮಾರಕ ನಿರ್ಮಿಸಬೇಕೆಂದು ಒತ್ತಾಯಿಸಿ ಡಾ.ವಿಷ್ಣು ಸೇನಾ ಸಮಿತಿ ಜಿಲ್ಲಾ ಪದಾಧಿಕಾರಿಗಳು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಬಾಲಣ್ಣ ಕುಟುಂಬದವರು ನ್ಯಾಯಾಲಯಕ್ಕೆ ಸುಳ್ಳು ದಾಖಲೆ ನೀಡಿದ್ದಾರೆ. ರಾತ್ರೋರಾತ್ರಿ ವಿಷ್ಣುವರ್ಧನ್​ ಸ್ಮಾರಕ ತೆರವು ಮಾಡಿದ್ದಾರೆ. ಈ ಮೂಲಕ ಕನ್ನಡ ಮೇರು ನಟನಿಗೆ ಅವಮಾನ ಮಾಡಿದ್ದಾರೆ. ಅವರು ಜೀವಂತ ಇರುವಾಗಲೂ ಕೆಲವರು ನಾನಾ ತೊಂದರೆ ನೀಡಿದರು. ಈಗ ಸ್ಮಾರಕವನ್ನೂ ತೆರವು ಮಾಡಿ ಸತ್ತ ನಂತರವೂ ಅಭಿಮಾನಿಗಳಿಗೆ ನೆಮ್ಮದಿ ಇಲ್ಲದಂತೆ ಮಾಡಿದ್ದಾರೆ. ಇದನ್ನು ಯಾವೊಬ್ಬ ಕನ್ನಡ ಅಭಿಮಾನಿ ಸಹಿಸಲಾರ. ಸರ್ಕಾರ ಹಾಗೂ ಚಲನಚಿತ್ರ ಮಂಡಳಿಯೂ ಮೋಸ ಮಾಡಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಕ್ಷಣ ಸರ್ಕಾರ ಮಧ್ಯ ಪ್ರವೇಶ ಮಾಡಬೇಕು. ಆದ ಪ್ರಮಾದ ಸರಿಪಡಿಸಬೇಕು. ಪ್ರಕರಣದ ತಾರ್ಕಿಕ ಅಂತ್ಯ ಕಾಣಿಸಬೇಕು. ಸ್ಮಾರಕ ಇದ್ದ ಜಾಗದಲ್ಲೇ ಹೊಸದಾಗಿ ಮರು ನಿರ್ಮಾಣ ಮಾಡಬೇಕು. ಈ ಮೂಲಕ ಕೋಟ್ಯಂತರ ಅಭಿಮಾನಿಗಳ ನಂಬಿಕೆ ಉಳಿಸಿಕೊಳ್ಳಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಅಭಿಮಾನಿಗಳು ಉಗ್ರ ಹೋರಾಟ ಮಾಡುತ್ತೇವೆಂದು ಎಚ್ಚರಿಸಿದರು.

ಅಶೋಕ ವೃತ್ತದಿಂದ ತಹಸೀಲ್ದಾರ್​ ಕಚೇರಿವರೆಗೆ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಸಮಿತಿ ಪದಾಧಿಕಾರಿಗಳಾದ ವೀರನಗೌಡ ನೆರೆಗಲ್​, ಲಿಂಗರಾಜ್​ ಬಿಳೇಬಾವಿ, ವಿಜಯ್​ ಅಮೃತರಾಜ್​, ಪ್ರಕಾಶ, ಶಿವರಾಜ್​ ವಾಲ್ಮೀಕಿ, ದೇವರಾಜ್​ ಕೋಳೂರು, ಸಂತೋಷ ಬಾರಕೇರ, ಲಕ್ಷ$್ಮಣ ಗೊಲ್ಲರ, ಭೀಮನಗೌಡ ಹಿರೇಗೌಡರ್​ ಇತರರಿದ್ದರು.