ಕೊಪ್ಪಳ: ಕನ್ನಡ ಭಾಷೆ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ನಮ್ಮ ಭಾವನೆಗೆ ಧಕ್ಕೆ ತಂದಿರುವ ನಟ ಕಮಲ್ ಹಾಸನ್ ಕನ್ನಡಿಗರ ಕ್ಷಮೆ ಕೇಳಬೇಕು. ಅವರ ಚಿತ್ರ ರಾಜ್ಯದಲ್ಲಿ ಬಿಡುಗಡೆಗೆ ಅವಕಾಶ ನೀಡದಂತೆ ಒತ್ತಾಯಿಸಿ ಕರವೇ ಪದಾಧಿಕಾರಿಗಳು ಶುಕ್ರವಾರ ನಗರದ ಬಸ್ ನಿಲ್ದಾಣ ಮುಂಭಾಗ ಪ್ರತಿಭಟನೆ ನಡೆಸಿದರು.
ಭಾಷಾ ಜ್ಞಾನವಿಲ್ಲದೇ ಕಮಲ್ ಹಾಸನ್ ಮಾತನಾಡಿದ್ದಾರೆ. ತಮಿಳಿನಿಂದಲೇ ಕನ್ನಡ ಭಾಷೆ ಬಂದಿದೆ ಎಂದು ಹೇಳಿಕೆ ನೀಡಿದ್ದಾರೆ. ಇದು ಕನ್ನಡ ಮತ್ತು ಕನ್ನಡಿಗರಿಗೆ ಮಾಡುವ ಅವಮಾನ. ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಸಂಸತಿ ಹೊಂದಿದೆ. ಕಮಲ್ ಹೇಳಿಕೆಯಿಂದ ಕನ್ನಡಿಗರಿಗೆ ಅವಮಾನವಾಗಿದೆ. ಇದಕ್ಕೆ ಎಲ್ಲರೂ ವಿರೋಧಿಸಿದರೂ ಕ್ಷಮೆ ಕೇಳುವುದಿಲ್ಲವೆಂದು ಉದ್ಧಟತನ ಪ್ರದರ್ಶಿಸಿದ್ದಾರೆ. ಇದು ಕರ್ನಾಟಕಕ್ಕೆ ಮಾಡುವ ಅವಮಾನವೆಂದು ಆಕ್ರೋಶ ವ್ಯಕ್ತಪಡಿಸಿದರು. ಕಮಲ್ ಹಾಸನ್ ಪ್ರತಿಕೃತಿ ದಹಿಸಿ ಖಂಡಿಸಿದರು.
ಕೂಡಲೇ ಕಮಲ್ ಹಾಸನ್ ಕನ್ನಡಿಗರಿಗೆ ಬೇಷರತ್ ಕ್ಷಮೆ ಕೇಳಬೇಕು. ತಮ್ಮ ಹೇಳಿಕೆ ವಾಪಸ್ ಪಡೆಯಬೇಕು. ಅಲ್ಲಿವರೆಗೂ ಅವರ ಚಿತ್ರ ಥಗ್ ಲ್ೈ ರಾಜ್ಯದಲ್ಲಿ ಬಿಡುಗಡೆಗೆ ಅವಕಾಶ ನೀಡಬಾರದು. ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಚಿತ್ರರಂಗ ಸಹ ಈ ನಿಟ್ಟಿನಲ್ಲಿ ದಿಟ್ಟತನ ಪ್ರದರ್ಶಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ಉಗ್ರ ಸ್ವರೂಪ ಪಡೆಯಲಿದೆ ಎಂದು ಎಚ್ಚರಿಸಿದರು.
ಕರವೇ ಜಿಲ್ಲಾಧ್ಯಕ್ಷ ಬಿ.ಗಿರೀಶಾನಂದ, ಪದಾಧಿಕಾರಿಗಳಾದ ಬಸನಗೌಡ ಪಾಟೀಲ, ಹನುಮಂತ ಬೆಸ್ತರ, ನಿಂಗಪ್ಪ ಮೂಗಿನ್, ಪ್ರಫುಲ್ಕುಮಾರ ಪಾಟೀಲ, ಪ್ರಕಾಶ ಮನ್ನೇರಾಳ, ರಮೇಶ ಹಾಲವರ್ತಿ, ಚಂದ್ರಶೇಖರ ಶೆಟ್ಟಿ ಇತರರಿದ್ದರು.