ಜಿಲ್ಲೆ

ಅಪಘಾತದಲ್ಲಿ ನಾಲ್ಕು ಗೋವುಗಳ ಸಾವು

ಕೊಪ್ಪಳ; ತಾಲೂಕಿನ ಹಿಟ್ನಾಳ ಟೋಲ್​ ಬಳಿ ಗೋವುಗಳನ್ನು ಸಾಗಿಸುತ್ತಿದ್ದ ಕಂಟೇನರ್​ ಅಪಘಾತವಾಗಿದ್ದು, ನಾಲ್ಕು ಗೋವುಗಳು ಮೃತಪಟ್ಟಿವೆ. 15 ಹಸುಗಳು ಗಾಯಗೊಂಡಿದ್ದು ಕೊಪ್ಪಳದ ಗೋಶಾಲೆಗೆ ದಾಖಲಿಸಲಾಗಿದೆ.

ಗಿಣಿಗೇರಾದಿಂದ ಆಂಧ್ರಪ್ರದೇಶದ ಅನಂತಪುರ ಸಂತೆಗೆ ಗೋವುಗಳನ್ನು ಸಾಗಿಸಲಾಗುತ್ತಿತ್ತು. ಒಟ್ಟು 19 ಹಸುಗಳಿದ್ದವು. ಕರ್ನಾಟಕಕ್ಕಿಂತ ಹೆಚ್ಚಿನ ಬೆಲೆ ದೊರೆಯಲಿದೆ ಎಂಬ ಕಾರಣಕ್ಕೆ ಸಾಗಣೆ ಮಾಡಲಾಗುತ್ತಿತ್ತು ಎನ್ನಲಾಗಿದೆ. ಶುಕ್ರವಾರ ನಡೆವ ಸಂತೆಯಲ್ಲಿ ಮಾರಾಟ ಮಾಡಲು ಉದ್ದೇಶಿಸಿದ್ದರು. ಹಿಟ್ನಾಳ ಬಳಿಯ ಟೋಲ್​ನಲ್ಲಿ ಬೆಳಗಿನ ಜಾವ ಐದು ಗಂಟೆಗೆ ಕಂಟೇನರ್​ ಡಿವೈಡರ್​ಗೆ ಡಿಕ್ಕಿಯಾಗಿ ಪಲ್ಟಿಯಾಗಿದೆ.

ಸ್ಥಳದಲ್ಲಿ ನಾಲ್ಕು ಗೋವುಗಳು ಮೃತಪಟ್ಟಿವೆ. ನಾಲ್ಕು ರಾಸುಗಳಿಗೆ ಗಾಯಗಳಾಗಿವೆ. ಬಾಕಿ ಜಾನುವಾರುಗಳನ್ನು ಕೊಪ್ಪಳದ ಗೋಶಾಲೆಗೆ ದಾಖಲಿಸಲಾಗಿದೆ. ಚಾಲಕ ಹಾಗೂ ಇತರರು ತಪ್ಪಿಸಿಕೊಂಡಿದ್ದಾರೆ. ಸ್ಥಳಕ್ಕೆ ಮುನಿರಾಬಾದ್​ ಪಿಎಸ್​ಐ ಸುನಿಲ್​ ಕುಮಾರ್​ ಭೇಟಿ ನೀಡಿ ಪರಿಶೀಲಿಸಿದರು. ಮುನಿರಾಬಾದ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಲಾರಿ ಮಾಲೀಕ ಹಾಗೂ ಗೋವುಗಳನ್ನು ಸಾಗಿಸುತ್ತಿದ್ದವರಿಗೆ ನೋಟಿಸ್​ ನೀಡಿದ್ದು ತನಿಖೆ ಮುಂದುವರೆಸಲಾಗಿದೆ.