ಕೊಪ್ಪಳದಲ್ಲಿ ಬುಧವಾರ ಪಿಆರ್​ಒ, ಎಪಿಆರ್​ಒಗಳಿಗೆ ಈಶಾನ್ಯ ಪದವೀಧರ ಕ್ಷೇತ್ರ ಚುನಾವಣೆ ತರಬೇತಿ ನೀಡಲಾಯಿತು. 
ಜಿಲ್ಲೆ

ನ್ಯಾಯ ಸಮ್ಮತ ಚುನಾವಣೆ ನಡೆವಂತೆ ನೋಡಿಕೊಳ್ಳಿ

Kopala - Raveendra V K

ಕೊಪ್ಪಳ: ಮತಗಟ್ಟೆ ಅಧಿಕಾರಿಗಳು ಮುಕ್ತ, ನ್ಯಾಯಸಮ್ಮತ, ಶಾಂತಿಯುತ ಮತದಾನ ನಡೆಯುವಂತೆ ನೋಡಿಕೊಳ್ಳಿ ಎಂದು ಮಾಸ್ಟರ್​ ಟೆನರ್​ ವಿದ್ಯಾಧರ ಮೇರಾಜ ಹೇಳಿದರು.

ಈಶಾನ್ಯ ಪದವೀಧರ ಕ್ಷೇತ್ರ ಚುನಾವಣೆ ಹಿನ್ನೆಲೆಯಲ್ಲಿ ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್​ನಲ್ಲಿ ಪಿಆರ್​ಒ, ಎಪಿಆರ್​ಒಗಳಿಗೆ ಬುಧವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮದಲ್ಲಿ ತರಬೇತಿ ನೀಡಿ ಮಾತನಾಡಿದರು.

ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆ ಜೂನ್​ 3ರಂದು ನಡೆಯಲಿದೆ. ಜಿಲ್ಲೆಯಲ್ಲಿ 24 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ನೀವೆಲ್ಲ ಮುಕ್ತ, ನ್ಯಾಯಸಮ್ಮತ, ಶಾಂತಿಯುತ ಮತದಾನ ನಡೆಯುವಂತೆ ನೋಡಿಕೊಳ್ಳಬೇಕು. ಮಸ್ಟರಿಂಗ್​ ಕಾರ್ಯಗಳಲ್ಲಿ ತಿಳಿಸಿದ ಸಮಯ ಮತ್ತು ಸ್ಥಳದಲ್ಲಿ ಸೇರಬೇಕು. ಮತಪೆಟ್ಟಿಗೆ, ಮತಪತ್ರಗಳನ್ನು ಪಡೆದುಕೊಳ್ಳಿ. ಏಜೆಂಟ್​ ನೇಮಕ, ಮತದಾನಕ್ಕೆ ಬೇಕಾಗುವ ಸಾಮಗ್ರಿಗಳ ಬಗ್ಗೆ ಅರಿತುಕೊಳ್ಳಿ.
ಎನಾದರೂ ಗೊಂದಲಗಳಿದ್ದಲ್ಲಿ ಮೇಲಧಿಕಾರಿಗಳಿಂದ ಸಲಹೆ ಪಡೆಯಿರಿ ಎಂದರು.

ಮತಗಟ್ಟೆ ವ್ಯವಸ್ಥೆ, ಮತಪತ್ರ ನಿರ್ವಹಣೆ ಹಾಗೂ ಗ್ರೀನ್​ ಪೇಪರ್​ ಸೀಲ್​ ಅಳವಡಿಕೆ ಬಗ್ಗೆ ಗೊತ್ತಿರಲಿ. ಮತದಾನ ನಡೆಯುವಾಗ ಯಾವುದೇ ಘಟನೆಗಳು ಸಂಭವಿಸಿದಲ್ಲಿ ಕಾಲ ಕಾಲಕ್ಕೆ ಪಿಆರ್​ಒ ದಿನಚರಿಯಲ್ಲಿ ದಾಖಲಿಸಿ. ನಿಗದಿತ ಸಮಯಕ್ಕೆ ಮತದಾನ ಪೂರ್ಣಗೊಳಿಸಿ. ಮತದಾನದ ಮುಕ್ತಾಯ ಸಮಯಕ್ಕೆ ಹಾಜರಿದ್ದ ಎಲ್ಲ ಮತದಾರರರಿಗೆ ಮತದಾನಕ್ಕೆ ಅವಕಾಶ ನೀಡಿ. ಮತದಾನ ನಂತರ ಬ್ಯಾಲೆಟ್​ ಬಾಕ್ಸ್​ ಅನ್ನು ಸೀಲ್​ ಮಾಡಿ, ಅರಗು ಮುದ್ರೆ, ವಿಳಾಸ ಚೀಟಿ, ಬಟ್ಟೆಯ ಚೀಲದಲ್ಲಿಟ್ಟು ಹೊಲಿಗೆ ಹಾಕಿ ಅದರ ಮೇಲೂ ವ್ಯಾಕ್ಸ್​ ಸೀಲ್​, ವಿಳಾಸ ಚೀಟಿ ಹಚ್ಚಿ ಮೊಹರು ಮಾಡಿ.

ಉಮೇದುವಾರ/ಏಜೆಂಟ್​ ಬಯಸಿದರೆ ಅವರೂ ಸಹಿ ಮಾಡಬಹುದು. ಚುನಾವಣೆಗೆ ಸಂಬಂಧಿಸಿದ ಎಲ್ಲ ಕಾಗದಗಳನ್ನು ಮೊಹರು ಮಾಡಿ. ನಿಮ್ಮ ಕರ್ತವ್ಯ ನಿಷ್ಪಕ್ಷಪಾತವಾಗಿ ನಿರ್ವಹಿಸಿ ಎಂದು ಸಲಹೆ ನೀಡಿದರು. ಎಡಿಸಿ ಸಾವಿತ್ರಿ ಕಡಿ, ತಹಸೀಲ್ದಾರ್​ಗಳು, ಜಿಲ್ಲಾ ತರಬೇತಿ ಸಂಸ್ಥೆ ಪ್ರಾಚಾರ್ಯ ಕೃಷ್ಣಮೂರ್ತಿ ದೇಸಾಯಿ, ಪಿಆರ್​ಒ, ಎಪಿಆರ್​ಗಳಿದ್ದರು.