ಕೊಪ್ಪಳ: ವಿವಿಧ ಇಲಾಖೆಗಳಲ್ಲಿ ಅನುದಾನವಿದ್ದರೂ ಕಾಮಗಾರಿ ನಡೆಸಲು ಜಾಗ ಕೊರತೆ ಇದೆ ಎಂದು ಹೇಳುತ್ತಿದ್ದೀರಿ. ಸುಮ್ಮನೆ ಕೂರುವ ಬದಲು ಜಾಗ ಹುಡುಕಿ ಪ್ರಸ್ತಾವನೆ ಸಲ್ಲಿಸಿದಲ್ಲಿ ಕೆಕೆಆರ್ಡಿಬಿಯಿಂದ ಅನುದಾನ ಒದಿಸಿ ಅನುಕೂಲ ಕಲ್ಪಿಸಲಾಗುವುದೆಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಕೆಕೆಆರ್ಡಿಬಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು.
ಅನುದಾನ ಬಿಡುಗಡೆಯಾಗಿದ್ದರೂ ಕಾಮಗಾರಿ ಆರಂಭಕ್ಕೆ ಜಮೀನು ಸಿಗುತ್ತಿಲ್ಲವೆಂದು ಬಹುತೇಕ ಇಲಾಖೆಗಳ ಅಧಿಕಾರಿಗಳು ಹೇಳುತ್ತಾರೆ. ಜಮೀನು ಖರೀದಿಗೆ ಹಣಕಾಸಿನ ಕೊರತೆ ಇಲ್ಲ. ಅಧಿಕಾರಿಗಳು ಸುಮ್ಮನೆ ಕೂಡಬಾರದು. ಜಮೀನು ಖರೀದಿಗೆಂದೇ ಕೆಕೆಆರ್ಡಿಬಿನಲ್ಲಿ ಹಣ ಇದೆ. ಖರೀದಿ ಪ್ರಕ್ರಿಯೆ ನಡೆಸಲು ಅಧಿಕಾರಿಗಳು ಮುಂದೆ ಬಂದಲಿ ಅನುದಾನ ಸಿಗಲಿದೆ. ನಮ್ಮ ಜಿಲ್ಲೆಗೆ ಮಂಜೂರಾದ ಶಾಲಾ ಕಟ್ಟಡಗಳಿಗೆ ಅನುದಾನ ನೀಡಲಾಗಿದೆ. ನಿವೇಶನ ಲಭ್ಯವಿರುವೆಡೆ ವಾರದಲ್ಲಿ ಟೆಂಡರ್ ಕರೆದು ಕಾಮಗಾರಿ ಆರಂಭಿಸಿ. ಹೊಸ ಮುರಾರ್ಜಿ ದೇಸಾಯಿ ಶಾಲೆಗಳಿಗೆ ಜಮೀನು ಸಂಬಂಧ ಪ್ರಸ್ತಾವನೆ ಸಲ್ಲಿಸಿ. ಯಲಬುರ್ಗಾ ಕ್ಷೇತ್ರಕ್ಕೆ 15 ಬಸ್ ನಿಲ್ದಾಣಗಳು ಮಂಜೂರಾಗಿವೆ. ತಲಾ ಒಂದಕ್ಕೆ 3 ಕೋಟಿ ರೂ. ಅನುದಾನವಿದೆ. ತಕ್ಷಣ ಕಾಮಗಾರಿ ಆರಂಭಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಯಲಬುರ್ಗಾ ಕ್ಷೇತ್ರದ 9 ಬಸ್ ನಿಲ್ದಾಣಕ್ಕೆ ಕೆಕೆಆರ್ಡಿಬಿಯಿಂದ ಅನುದಾನ ಬಂದಿದೆ. ಮುರುಡಿ, ಹಿರೇಮ್ಯಾಗೇರಿ, ಗಾಣದಾಳು, ಮಂಡಲಗೇರಿ, ಹಿರೇಅರಳಿಹಳ್ಳಿ ಮತ್ತು ಬೆಣಕಲ್ ಗ್ರಾಮಗಳಲ್ಲಿ ಬಸ್ ನಿಲ್ದಾಣ ನಿಮಾರ್ಣಕ್ಕೆ ಸಿಎಂ ಪರಿಹಾರ ನಿಧಿಯಿಂದ ಅನುದಾನ ನಿಗದಿಪಡಿಸಲಾಗಿದೆ ಎಂದು ಸಾರಿಗೆ ಅಧಿಕಾರಿಗಳು ತಿಳಿಸಿದರು.
ಜಿಲ್ಲೆಗೆ ಮಂಜೂರಾದ ಶಾಲೆ, ಕಾಲೇಜು, ವಸತಿ ಶಾಲೆಗಳಿಗೆ ವಿವಿಧೆಡೆ ಜಮೀನು ಗುರುತಿಸಿ ರ್ನಿಣಯಿಸಲಾಯಿತು. ಈಗಾಗಲೇ ನಿವೇಶನ ಇರುವ ಕಡೆ ಅನುದಾನ ಬಿಡುಗಡೆ, ಟೆಂಡರ್ ನಡೆಸಲು ಅನುಮತಿಸಲಾಯಿತು. ಕೊಪ್ಪಳ ವಿವಿ, ಜಿಲ್ಲಾ ನ್ಯಾಯಾಲಯ, ಕೌಶಲಾಭಿವೃದ್ಧಿ ಕೇಂದ್ರ ನಿಮಾರ್ಣ, ಪ್ರಮುಖ ಕಟ್ಟಡ ನಿರ್ಮಾಣಕ್ಕೆ ಜಮೀನು ಗುರುತಿಸಲು ಸಭೆಯಲ್ಲಿ ರ್ನಿಣಯಿಸಲಾಯಿತು.
ಡಿಸಿ ನಲಿನ್ ಅತುಲ್, ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ, ಎಡಿಸಿ ಸಾವಿತ್ರಿಕಡಿ, ಎಸಿ ಕ್ಯಾ.ಮಹೇಶ ಮಾಲಗಿತ್ತಿ ಇತರ ಅಧಿಕಾರಿಗಳಿದ್ದರು.