ಸಿದ್ದರಾಮ ಕಲ್ಮಠ 
ಜಿಲ್ಲೆ

ಜಿಲ್ಲಾ ಕಸಾಪ ಚುನಾವಣೆಯಲ್ಲಿ ಹೊಸಬರಿಗೆ ಆದ್ಯತೆ: ಪರಿಷತ್‌ನ ಬಳ್ಳಾರಿ ಜಿಲ್ಲಾ ಅಧ್ಯಕ್ಷ ಸಿದ್ದರಾಮ ಕಲ್ಮಠ ಹೇಳಿಕೆ

ಬಳ್ಳಾರಿ: ಕಸಾಪ ಚುನಾವಣೆಯಲ್ಲಿ ಹೊಸಬರಿಗೆ ಅವಕಾಶ ನೀಡಲಾಗುವುದು ಎಂದು ಕಸಾಪ ಜಿಲ್ಲಾ ಅಧ್ಯಕ್ಷ ಸಿದ್ದರಾಮ ಕಲ್ಮಠ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. 2016 ರಿಂದ 2021ರವರೆಗೆ ಕಸಾಪ ಜಿಲ್ಲಾ ಅಧ್ಯಕ್ಷನಾಗಿ ಜಿಲ್ಲೆ, ಹೋಬಳಿ, ತಾಲೂಕು ಮಟ್ಟದಲ್ಲಿ ಕನ್ನಡ ಪರ ಹಲವು ಕಾರ್ಯಕ್ರಮ ಹಮ್ಮಿಕೊಂಡಿದ್ದೇನೆ. ಕರೊನಾ ಕಾಲದಲ್ಲಿ ಪರಿಷತ್‌ನಿಂದ ಅತ್ಯುತ್ತಮ ಕಾರ್ಯಕ್ರಮ ಏರ್ಪಡಿಸಿದ್ದೇವೆ. ಜಿಲ್ಲೆಯ ವಿವಿಧ ತಾಲೂಕು, ಹೋಬಳಿ, ಗ್ರಾಮಗಳಲ್ಲಿ ಜಿಲ್ಲೆಯ ವಿದ್ವಾಂಸರ ನೇತೃತ್ವದಲ್ಲಿ ಎರಡು ಜಿಲ್ಲಾ ಹಾಗೂ ಏಳು ತಾಲೂಕು ಸಮ್ಮೇಳನ ನಡೆಸಿದ್ದೇವೆ. ನೂರಾರು ದತ್ತಿ ಉಪನ್ಯಾಸ ಕೂಡ ಮಾಡಿದ್ದೇವೆ. ಹೊಸಬರಿಗೆ ಆದ್ಯತೆ ನೀಡುವ ಉದ್ದೇಶದಿಂದ ಸ್ಪರ್ಧೆಯಿಂದ ಹಿಂದೆ ಸರಿದಿದ್ದೇನೆ ಎಂದರು.

ಜಿಲ್ಲಾ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಟಿ.ಎಂ.ಪಂಪಾಪತಿ ಮಾತನಾಡಿ, ಜಿಲ್ಲೆಯ ಜನರ ಆಶಯದಂತೆ ಮುಂದಿನ ದಿನಗಳಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ಜಿಲ್ಲೆಯಲ್ಲೇ ಹಮ್ಮಿಕೊಳ್ಳಲಾಗುವುದು. ಮಕ್ಕಳ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗುವುದು. ಪ್ರತಿ ತಾಲೂಕಿನಲ್ಲಿ ಕನ್ನಡ ಸಾಹಿತ್ಯಭವನ ನಿರ್ಮಿಸಲು ಶ್ರಮಿಸುವ ಜತೆಗೆ ಹಾಲಿ ಅಧ್ಯಕ್ಷರ ಸಮಯದಲ್ಲಿ ಬಾಕಿ ಉಳಿದ ಮತ್ತು ಕನ್ನಡಪರ ಹೊಸ ಯೋಜನೆಗಳನ್ನು ರೂಪಿಸಲಾಗುವುದು ಎಂದು ತಿಳಿಸಿದರು. ಸದಸ್ಯರಾದ ಕಮ್ಮರ್ಚೇಡು ಮಂಜುನಾಥ, ವೀರೇಶ್ ಕಡಕಲ್ಲು, ಮಹಮ್ಮದ್ ರಫಿಕ್, ಎಚ್.ಕೆ.ಗೌರಿಶಂಕರ ಇದ್ದರು.