ಜಿಲ್ಲೆ

ಸಮಾಜ ಘಾತುಕ ಕೃತ್ಯ ತಡೆಗೆ ಸಚಿವ ಗುಂಡೂರಾವ್ ಕಟ್ಟು ನಿಟ್ಟಿನ ಸೂಚನೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ, ಸುವ್ಯವಸ್ಥೆಗೆ ಆದ್ಯತೆ ನೀಡಿ ಸಮಾಜ ಘಾತುಕ ಕೃತ್ಯಗಳು ನಡೆಯದಂತೆ ಎಚ್ಚರ ವಹಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಕಟ್ಟಿ ನಿಟ್ಟಿನ ಸೂಚನೆ ನೀಡಿದ್ದಾರೆ.


ನಗರದ ಸರ್ಕೀಟ್ ಹೌಸ್‌ನಲ್ಲಿ ಶುಕ್ರವಾರ ರಾತ್ರಿ ಪೊಲೀಸ್ ಅಧಿಕಾರಿಗಳೊಂದಿಗೆ ಸ್ಪೀಕರ್ ಯು.ಟಿ.ಖಾದರ್ ಉಪಸ್ಥಿತಿಯಲ್ಲಿ ಸಭೆ ನಡೆಸಿದ ಅವರು, ಸಮಾಜಘಾತುಕ ಹಾಗೂ ವಿನಾ ಕಾರಣ ಸಾಮರಸ್ಯ ಕೆಡಹುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಜನತೆ ಶಾಂತಿಯಿಂದ ಜೀವನ ನಡೆಸುವಂತಾಗಬೇಕು. ಕೂಟ ಸೇರುವಿಕೆ, ಕುಮ್ಮಕ್ಕು, ಕಾನೂನು ಸುವ್ಯವಸ್ಥೆಗೆ ಭಂಗ ತರುವ ಯಾವುದೇ ಕೃತ್ಯವನ್ನು ಮುಲಾಜಿಲ್ಲದೆ ಮಟ್ಟಹಾಕುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.


ಮುಂದಿನ ವಾರದಲ್ಲಿ ಮುಸಲ್ಮಾನರ ಹಬ್ಬ ಬಕ್ರೀದ್ ಬರುತ್ತಿದ್ದು, ಜಿಲ್ಲೆಯಲ್ಲಿ ಗಸ್ತು ಹೆಚ್ಚಿಸಿ, ತೀವ್ರ ನಿಗಾ ವಹಿಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಎಚ್ಚರ ವಹಿಸಬೇಕು. ಯಾವುದೇ ದುಷ್ಕೃತ್ಯಗಳು ನಡೆದರೆ ಪೊಲೀಸ್ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿಸಲಾಗುದು ಎಂದು ಎಚ್ಚರಿಕೆ ನೀಡಿದರು.


ಜಿಲ್ಲೆಗೆ ಡ್ರಗ್ಸ್ ವ್ಯಾಪಕವಾಗಿ ಪೂರೈಕೆಯಾಗುತ್ತಿದ್ದು, ವಿದ್ಯಾರ್ಥಿಗಳನ್ನು ಗುರಿಯಾಗಿಸಿ ಮಾರಾಟ ಮಾಡಲಾಗುತ್ತಿದೆ. ಇದರ ವಿರುದ್ಧ ಕಠಿಣ ಕ್ರಮವಾಗಬೇಕಿದೆ. ಜತೆಗೆ ಯುವ ಸಮುದಾಯಕ್ಕೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಿದೆ ಎಂದರು.


ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್, ಡಿಸಿಪಿಗಳಾದ ಅಂಶು ಕುಮಾರ್, ದಿನೇಶ್ ಕುಮಾರ್ ಬಿ.ಪಿ., ಎಸ್ಪಿ ಸಿ.ಬಿ.ರಿಷ್ಯಂತ್, ಎಸಿಪಿ ರವೀಶ್ ನಾಯಕ್ ಮೊದಲಾದವರಿದ್ದರು.