ವಿಜಯವಾಣಿ ಸುದ್ದಿಜಾಲ ಉಡುಪಿ
ನೈತಿಕ ಅಧಿಕಾರ ಎಂದರೇನು? ಸುನೀಲ್ಕುಮಾರ್ ಅವರೊಬ್ಬರಿಗೇ ನೈತಿಕತೆ ಬರೆದು ಕೊಟ್ಟಿದ್ದಾರಾ? ಮಹಿಳೆಯಾಗಿ ನಾನೊಬ್ಬ ಉಸ್ತುವಾರಿ ಸಚಿವೆ. ನನಗೆ ನೈತಿಕತೆ ಇಲ್ಲ ಎಂದು ಹೇಳಿದೆ ಏನು ಅರ್ಥ? ಬಹಳ ಚಂದದ ಮಾತುಗಾರರು ತಾವು. ಸುನೀಲ್ಕುಮಾರ್ರೇ ಮೊದಲು ನೈತಿಕತೆಯ ಅರ್ಥ ಹೇಳಿ. ತಾನೊಬ್ಬನೇ ಬುದ್ಧಿವಂತ, ಸರ್ವಜ್ಞ. ಉಳಿದವರೆಲ್ಲ ದಡ್ಡರು ಎಂದುಕೊಂಡಿದ್ದೀರಾ ಎಂದು ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾಜಿ ಸಚಿವ ಸುನೀಲಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಉಡುಪಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಜೂನ್ 21ರಂದು ಆಯೋಜಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, 'ಚಕ್ರವರ್ತಿ ಸೂಲಿಬೆಲೆ ಬಗ್ಗೆ ಮಾತಾಡಲು ಹೆಬ್ಬಾಳ್ಕರ್ಗೆ ನೈತಿಕತೆ ಇಲ್ಲ' ಎಂದಿದ್ದ ಸುನೀಲ್ಕುಮಾರ್ ಹೇಳಿಕೆಗೆ ಅವರು ಕಿಡಿಕಾರಿದರು.
ಬಿ.ಆರ್. ಪಾಟೀಲ ಅವರ ಆಡಿಯೋ ವಿಚಾರವಾಗಿ ಮಾತನಾಡಲಿ ಸಚಿವೆ ಲಕ್ಷ್ಮೀ ನಿರಾಕರಿಸಿದರು. ನೋ ಕಮೆಂಟ್ಸ್. ಆ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ ಎಂದು ಮೂರು ಬಾರಿ ಪುನರುಚ್ಚರಿಸಿದರು.
ಕರಾವಳಿ ಜಿಲ್ಲೆಯ ಗ್ರಾಮಸಭೆಗಳಲ್ಲಿ ತುಳು ನಿಷೇಧದ ಬಗ್ಗೆ ಸದಾನಂದ ಗೌಡ, ಕೋಟ ಶ್ರೀನಿವಾಸ ಪೂಜಾರಿ ವಿರೋಧದ ವಿಚಾರವಾಗಿ ಪ್ರತಿಕ್ರಿಯಿಸಿ, ಈ ಬಗ್ಗೆ ತಿಳಿದಿಲ್ಲ. ಸಿಇಒ ಅವರೊಂದಿಗೆ ಮಾತನಾಡುತ್ತೇನೆ. ಇದು ಸ್ಥಳೀಯ ಭಾಷೆಯ ವಿಚಾರ. ಸೂಕ್ಷ್ಮವಾಗಿ ಅವಲೋಕಿಸಿ ಮಾತನಾಡಬೇಕು ಎಂದರು.
ಹಿಂದು ಜಾಗರಣಾ ವೇದಿಕೆ ಮುಖಂಡ ಶ್ರೀಕಾಂತ ಶೆಟ್ಟಿ ಅವರಿಗೆ ಮೂರು ತಿಂಗಳು ಬಾಗಲಕೋಟೆ ಪ್ರವೇಶಕ್ಕೆ ನಿಷೇಧ ಮಾಡಿರುವ ಕುರಿತು ಮಾತನಾಡಿದ ಸಚಿವೆ ಲಕ್ಷ್ಮೀ, ಯಾವ ವಾಗ್ಮಿಗಳನ್ನು, ಭಾಷಣಕಾರರನ್ನು ನಮ್ಮ ಸರ್ಕಾರ ಟಾರ್ಗೆಟ್ ಮಾಡುತ್ತಿಲ್ಲ. ಭಾಷಣ ವಿಷಯಾಧಾರಿತ ಆಗಿರಬೇಕು. ವಿಷಯಾಂತರ ಆಗಬಾರದು. ಸಮಾಜದ ಕೋಮು ಸೌಹಾರ್ದ ಕೆಡಿಸಬಾರದು. ಎಲ್ಲರ ಹಿತಾಸಕ್ತಿ ಕಾಪಾಡಬೇಕು. ವಿಷಬೀಜ ಬಿತ್ತಿ ಸಮಾಜ ಒಡೆಯಬಾರದು. ಅಂತಹವರ ವಿರುದ್ಧ ಕಾನೂನು ಕ್ರಮ ಖಂಡಿತ ಆಗಲಿದೆ. ಶ್ರೀಕಾಂತ ಶೆಟ್ಟಿ ಅವರ ಹಿಂದಿನ ಭಾಷಣಗಳನ್ನೆಲ್ಲ ಒಮ್ಮೆ ಕೇಳಿ. ಆಗ ಎಲ್ಲ ವಿಚಾರ ನಿಮಗೇ ಅರಿವಾಗುತ್ತದೆ ಎಂದರು.