ಜಿಲ್ಲೆ

ಪಡಿತರಕ್ಕೆ ಹಣ ಪಡೆದರೆ ದೂರು ಕೊಡಿ: ಜಿಪಂ ಸಿಇಒ ಕೆ.ಆರ್.ನಂದಿನಿ ಹೇಳಿಕೆ

ಕೆ.ಎನ್.ರಾಘವೇಂದ್ರ

ಮಂಡ್ಯ: ನ್ಯಾಯಬೆಲೆ ಅಂಗಡಿ ಮಾಲೀಕರು ಪಡಿತರ ವಿತರಿಸುವ ಸಂದರ್ಭದಲ್ಲಿ ಸಾರ್ವಜನಿಕರ ಬಳಿ ಹಣ ಪಡೆಯಬಾರದು. ಅದರಂತೆ ಜಿಲ್ಲೆಯಲ್ಲಿ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಹಣ ಪಡೆಯುತ್ತಿದ್ದರೆ ಸಾರ್ವಜನಿಕರು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ಸಲ್ಲಿಸಿ. ನಂತರ ಮಾಲೀಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಹೇಳಿದರು.

ನಗರದ ಜಿಪಂ ಕಚೇರಿಯ ಮಿನಿ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಗ್ಯಾರಂಟಿ ಯೋಜನೆಯ ಅನುಷ್ಠಾನ ಪ್ರಾಧಿಕಾರದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಪಂಚ ಗ್ಯಾರಂಟಿ ಯೋಜನೆ ಎಲ್ಲ ಅರ್ಹ ಫಲಾನುಭವಿಗಳಿಗೆ ತಲುಪಬೇಕು. ಆಗ ಮಾತ್ರ ಯೋಜನೆ ಯಶಸ್ವಿಯಾದಂತೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಗ್ಯಾರಂಟಿ ಯೋಜನೆ ಅರ್ಹ ಫಲಾನುಭವಿಗಳಿಗೆ ತಲುಪಿಸುವ ಎಲ್ಲ ಕಾರ್ಯಗಳನ್ನು ಕೈಗೊಂಡಿದ್ದಾರೆ ಎಂದರು.

ಜಿಲ್ಲಾ ಗ್ಯಾರಂಟಿ ಯೋಜನೆಯ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಚಿಕ್ಕಲಿಂಗಯ್ಯ ಮಾತನಾಡಿ, ಗೃಹಲಕ್ಷ್ಮೀ ಯೋಜನೆಯಡಿ ಜಿಲ್ಲೆಯ ಅರ್ಹ ಫಲಾನುಭವಿಗಳಿಗೆ 2024ರ ಜನವರಿಯಿಂದ 2025 ಜನವರಿವರೆಗೆ 1,099 ಕೋಟಿ ರೂ ಅನುದಾನ ನೀಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು 4,48,769 ಅರ್ಹ ಫಲಾನುಭವಿಗಳಿದ್ದಾರೆ. ಜನವರಿ ಮಾಹೆಯಲ್ಲಿ 30.73 ಕೋಟಿ ರೂಗಳನ್ನು ಈಗಾಗಲೇ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗಿದೆ. ಬಾಕಿ ಹಣವನ್ನು ಶೀಘ್ರವೇ ಜಮೆ ಮಾಡಲಾಗುವುದು. 1,278 ಫಲಾನುಭವಿಗಳು ಐ.ಟಿ/ಜಿ.ಎಸ್.ಟಿ ತೆರಿಗೆದಾರರಲ್ಲವೆಂದು ಗೂಗಲ್ ಶೀಟ್ ಮೂಲಕ ಕೇಂದ್ರ ಕಚೇರಿಗೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದರು.

ಅನ್ನಭಾಗ್ಯ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು 4,47,166 ಫಲಾನುಭವಿಗಳಿದ್ದು, ಡಿಸೆಂಬರ್ ಮಾಹೆಯಲ್ಲಿ 23.35 ಕೋಟಿ ರೂ ಅನುದಾನ ಬಿಡುಗಡೆ ಮಾಡಲಾಗಿದೆ. 5 ಕೆ.ಜಿ ಪಡಿತರದ ಬದಲು ಹಣ ನೀಡುವ ಯೋಜನೆ ಜಾರಿಗೊಳಿಸಿದ ನಂತರ 402.06 ಕೋಟಿ ರೂ ಅನುದಾನವನ್ನು ಜಿಲ್ಲೆಯ ಅರ್ಹ ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗಿದೆ. ಕಳೆದ ಫೆಬ್ರವರಿ ಮಾಹೆಯಿಂದ ನೇರ ನಗದು ಬದಲು ಅಕ್ಕಿ ವಿತರಿಸಲಾಗುತ್ತಿದೆ. ಫೆಬ್ರವರಿ ಮಾಹೆಯ ಹೆಚ್ಚುವರಿ ಅಕ್ಕಿಯನ್ನು ಮಾರ್ಚ್ ಮಾಹೆಯಲ್ಲಿ ವಿತರಿಸಲಾಗುವುದು ಎಂದು ಹೇಳಿದರು.

ಜಿಲ್ಲೆಯಲ್ಲಿ ಶಕ್ತಿ ಯೋಜನೆಯಡಿ ಮಾರ್ಚ್ ಮಾಹೆಯಲ್ಲಿ ಒಟ್ಟು 64.19 ಲಕ್ಷ ಟಿಕೆಟ್ ಪಡೆದು ಮಹಿಳಾ ಪ್ರಯಾಣಿಕರು ಸಂಚರಿಸಿದ್ದಾರೆ. ಇದರಿಂದ 19.69 ಕೋಟಿ ರೂ ವೆಚ್ಚವಾಗಿದೆ. ಒಟ್ಟಾರೆ ಶೇ 67.28 ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಗೃಹ ಜ್ಯೋತಿ ಯೋಜನೆಯಡಿ ಜಿಲ್ಲೆಯಲ್ಲಿ 5,21,781 ಅರ್ಹ ಗ್ರಾಹಕರಿದ್ದು, ಮಾರ್ಚ್ ಮಾಹೆಯಲ್ಲಿ 1.70 ಕೋಟಿ ರೂ ವಿದ್ಯುತ್ ಯುನಿಟ್ ಬಳಕೆಯಾಗಿದೆ. ಇದಕ್ಕಾಗಿ ಸರ್ಕಾರ 14.89 ಕೋಟಿ ರೂ ಅನುದಾನ ಬಿಡುಗಡೆ ಮಾಡಲಾಗಿದೆ. ಜಿಲ್ಲೆಯಲ್ಲಿ ಶೇ 97.05 ಜನರು ಗೃಹಜ್ಯೋತಿ ವಿದ್ಯುತ್ ಬಳಸಿಕೊಳ್ಳುತ್ತಿದ್ದಾರೆ ಎಂದರು

ಯುವ ನಿಧಿ ಯೋಜನೆಯಡಿ 4,702 ಫಲಾನುಭವಿಗಳಿದ್ದು, ಜಿಲ್ಲೆಯ ಅರ್ಹ ಫಲಾನುಭವಿಗಳಿಗೆ 7.12 ಕೋಟಿ ರೂಗಳನ್ನು ಡಿ.ಬಿ.ಟಿ ಮೂಲಕ ನೀಡಲಾಗಿದೆ. ಜಿಲ್ಲೆಯಲ್ಲಿ ಯುವನಿಧಿ ಯೋಜನೆಯಡಿ ಶೇ.75.41 ರಷ್ಟು ಫಲಾನುಭವಿಗಳಿದ್ದಾರೆ ಎಂದು ವಿವರಿಸಿದರು.

ಸಭೆಯಲ್ಲಿ ಜಿಪಂ ಯೋಜನಾಧಿಕಾರಿ ಧನುಷ್, ಜಿಲ್ಲಾ ಗ್ಯಾರಂಟಿ ಯೋಜನೆಯ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಕೆ.ಸಿ.ಪ್ರಶಾಂತ್‌ಬಾಬು, ಎಸ್.ಎಚ್.ರಾಜೇಂದ್ರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ರಾಜಮೂರ್ತಿ, ಪ್ರಾಧಿಕಾರದ ಸದಸ್ಯರಾದ ರುದ್ರಪ್ಪ, ವೀಣಾ, ಬಸವರಾಜು ಇತರರಿದ್ದರು.