ಜಿಲ್ಲೆ

ಜಿಲ್ಲೆಯ ಜಿ.ಐ. ಬೆಳೆಗಳು ಹೆಚ್ಚು ಲಾಭದಾಯಕ

ಮಂಜುನಾಥ ತಿಮ್ಮಯ್ಯ

ಮೈಸೂರು: ಕೇಂದ್ರ ಸರ್ಕಾರದಿಂದ ಜಿ.ಐ.(ಜಿಯೋಗ್ರಫಿಕಲ್ ಇಂಡಿಕೇಷನ್) ಮಾನ್ಯತೆ ಪಡೆದಿರುವ ಜಿಲ್ಲೆಯ ನಂಜನಗೂಡು ರಸಬಾಳೆ, ಮೈಸೂರು ಮಲ್ಲಿಗೆ, ಮೈಸೂರು ವೀಳ್ಯದೆಲೆ ಕೃಷಿ ಹೆಚ್ಚು ಲಾಭದಾಯಕವಾಗಿದೆ. ರೈತರಿಗೆ ಆದಾಯ ಮೂಲವಾಗಿದೆ. ಆದ್ದರಿಂದ ಈ ಬೆಳೆಗಳನ್ನು ಬೆಳೆಯಲು ರೈತರು ಮುಂದಾಗಬೇಕು…


-ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಮಂಜುನಾಥ ಅಂಗಡಿ ಅವರ ಸಲಹೆ ಇದು. ನಂ.1 ಕನ್ನಡ ದಿನಪತ್ರಿಕೆ ‘ವಿಜಯವಾಣಿ’ ವತಿಯಿಂದ ಮೈಸೂರು ಪತ್ರಿಕಾಲಯದಲ್ಲಿ ಶನಿವಾರ ಆಯೋಜಿಸಿದ್ದ ಫೋನ್ ಇನ್ ಕಾರ್ಯಕ್ರಮದಲ್ಲಿ ಮಾತನಾಡಿದರು.


ಈ ಮೂರು ಬೆಳೆಗಳಿಗೆ ಉತ್ತೇಜನ, ಉತ್ಪಾದನೆ ವೃದ್ಧಿ, ಕ್ಷೇತ್ರ ವಿಸ್ತರಣೆ, ಮಾರುಕಟ್ಟೆ, ಸಂಸ್ಕರಣೆ ಮತ್ತು ಸಂಶೋಧನೆ ಒಟ್ಟೊಟ್ಟಿಗೆ ನಡೆಯುತ್ತಿದೆ. ಪ್ರೋತ್ಸಾಹಧನ ಸಹ ನೀಡಲಾಗುತ್ತಿದೆ. ಈ ರೀತಿಯ ಉಪಕ್ರಮಗಳ ಮೂಲಕ ರೈತರಿಗೆ ಅನುಕೂಲ ಕಲ್ಪಿಸಿಕೊಡಲಾಗುತ್ತಿದೆ. ಕೃಷಿಕರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಗ್ರಾಹಕರಿಂದಲೂ ಸ್ಪಂದನೆ ವ್ಯಕ್ತವಾಗಿದೆ ಎಂದರು.


ನಂಜನಗೂಡು ರಸಬಾಳೆಯನ್ನು 150 ಎಕರೆಯಲ್ಲಿ ಬೆಳೆಯಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ಹೆಚ್ಚುವರಿಯಾಗಿ 60 ಎಕರೆ ಪ್ರದೇಶ ವಿಸ್ತರಣೆಯಾಗಿದೆ. ನಂಜನಗೂಡು ಭಾಗದಲ್ಲಿರುವ ಮಣ್ಣಿನ ಲವಣಾಂಶ, ಕಬ್ಬಿಣಾಂಶದಿಂದ ರಸಬಾಳೆ ಗಾತ್ರ, ರುಚಿ ಉತ್ತಮವಾಗಿದೆ. ಬೇರೆ ಭಾಗದಲ್ಲಿ ಬೆಳೆದರೆ ಗಾತ್ರ ಹಾಗೆಯೇ ಇದ್ದರೂ ರುಚಿಯಲ್ಲಿ ವ್ಯತ್ಯಾಸವಾಗುತ್ತಿದೆ ಎಂದರು.


ಮಾರುಕಟ್ಟೆಯಲ್ಲಿ ಪ್ರತಿ ಕೆಜಿ 65 ರೂ. ದರವಿದೆ. ಈ ಬೆಳೆಯಿಂದ ಹೆಚ್ಚು ಲಾಭ ಬರಲಿದೆ. ಹೀಗಾಗಿ, ರೈತರು ಈ ನಂಜನಗೂಡು ರಸಬಾಳೆ ಬೆಳೆಯಲು ಒಲವು ತೋರುತ್ತಿದ್ದಾರೆ ಎಂದು ತಿಳಿಸಿದರು.


ಈ ಮೂರು ಬೆಳೆಗಳಿಗೆ ತೋಟಗಾರಿಕೆ ಇಲಾಖೆಯಿಂದ ಸಹಾಯಧನ ದೊರೆಯಲಿದೆ. ಎಸ್ಸಿ-ಎಸ್ಟಿ ರೈತರಿಗೆ ಶೇ.90ರಷ್ಟು, ಸಾಮಾನ್ಯ ರೈತರಿಗೆ ಶೇ.75ರಷ್ಟು ಆರ್ಥಿಕ ನೆರವು ಸಿಗಲಿದೆ. ಜತೆಗೆ, ನರೇಗಾ ಯೋಜನೆಯಡಿಯೂ ಪ್ರೋತ್ಸಾಹ ದೊರೆಯಲಿದೆ ಎಂದು ಹೇಳಿದರು.

ಮಲ್ಲಿಗೆಯಿಂದ ಸುಗಂಧ ಎಣ್ಣೆ


ಮೈಸೂರು ಮಲ್ಲಿಗೆ ಹೂವು ಬಳಸಿಕೊಂಡು ಭವಿಷ್ಯದಲ್ಲಿ ಸುಗಂಧ ಎಣ್ಣೆ ತಯಾರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಅಂಗಡಿ ತಿಳಿಸಿದರು.
‘ಮೈಸೂರು ಮಲ್ಲಿಗೆ’ ಬ್ರಾೃಂಡಿಂಗ್ ಮಾಡಲಾಗುತ್ತಿದ್ದು, ಜತೆಗೆ, ಸದ್ಯಕ್ಕೆ ಇಳುವರಿ ಕಡಿಮೆ ಇದೆ. ಹೀಗಾಗಿ, ಇನ್ನೂ ಎರಡು ವರ್ಷ ಈ ಬೆಳೆಯ ಕೃಷಿ ಪ್ರದೇಶ ವ್ಯಾಪ್ತಿ ವಿಸ್ತರಣೆ ಮಾಡಲಾಗುವುದು. ಬಳಿಕ ಮೈಸೂರು ಮಲ್ಲಿಗೆಯಿಂದ ಸುಗಂಧ ಎಣ್ಣೆ ಉತ್ಪಾದನೆಗೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ಗಡಿ ದಾಟಿದ ಜಿಐ ಬೆಳೆಗಳು:


ಭೌಗೋಳಿಕ ಮಾನ್ಯತೆ ಪಡೆದ ನಂಜನಗೂಡು ರಸಬಾಳೆ, ಮೈಸೂರು ಮಲ್ಲಿಗೆ, ಮೈಸೂರು ವೀಳ್ಯದೆಲೆ ಕೃಷಿ ಮೈಸೂರು ಜಿಲ್ಲೆ ಗಡಿ ದಾಟಿ ವಿಸ್ತರಣೆಯಾಗುತ್ತಿದ್ದು, ಕೊಡಗು, ಹಾಸನದಲ್ಲೂ ಈ ಮೂರು ಬೆಳೆಗಳನ್ನು ಬೆಳೆಯಲಾಗುತ್ತಿದೆ. ಈ ಕುರಿತು ಅಲ್ಲಿಯ ರೈತರೂ ಆಸಕ್ತಿ ತೋರುತ್ತಿದ್ದಾರೆ. ಆದರೆ, ಈ ಬೆಳೆಗಳ ಅಡಿ ದೊರೆಯುವ ಸೌಲಭ್ಯ, ಸವಲತ್ತು, ಆರ್ಥಿಕ ನೆರವು ಮೈಸೂರಿನ ರೈತರಿಗೆ ಮಾತ್ರ ಸಿಗಲಿದೆ. ಇದು ಬೇರೆ ಜಿಲ್ಲೆಯ ರೈತರಿಗೆ ಸಿಗಲ್ಲ. ಆದರೆ, ಅವರು ಇವುಗಳನ್ನು ಬೆಳೆಯಬಹುದು. ಇದಕ್ಕೆ ಯಾವುದೇ ನಿರ್ಬಂಧವಿಲ್ಲ ಎಂದು ಮಂಜುನಾಥ ಅಂಗಡಿ ತಿಳಿಸಿದರು.