ಕಡೂರು: ಜಿಲ್ಲಾದ್ಯಂತ ಜಾನಪದ ಕಲಾವಿದರನ್ನು ಒಂದೆಡೆ ವೇದಿಕೆಯಲ್ಲಿ ಸಮಾಗಮಗೊಳಿಸುವ ಮೂಲಕ ಅಜ್ಜಂಪುರ ತಾಲೂಕಿನ ಕಲ್ಲೇನಹಳ್ಳಿಯಲ್ಲಿ ಜಿಲ್ಲಾ ಜಾನಪದ ಸಮ್ಮೇಳನವನ್ನು ಅ.6ರಂದು ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದು ರಾಜ್ಯ ಜಾನಪದ ಪರಿಷತ್‌ನ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ತಿಳಿಸಿದರು.
ಅಜ್ಜಂಪುರ ತಾಲೂಕಿನ ಕಲ್ಲೇನಹಳ್ಳಿ ಗ್ರಾಪಂ ಕಚೇರಿಯಲ್ಲಿ ಭಾನುವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಮಾತನಾಡಿದ ಅವರು, ಕಳೆದ ಬಾರಿ ಮಲೆನಾಡು ಭಾಗದಲ್ಲಿ ಯಶಸ್ವಿಯಾಗಿ ನಡೆಸಿರುವ ಸಮ್ಮೇಳನದ ಪೂರಕವಾಗಿ ಈ ಬಾರಿ ಬಯಲುಸೀಮೆ ಭಾಗದಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಈ ನಿಟ್ಟಿನಲ್ಲಿ ಜಾನಪದ ಹಾಡುಗಾರಿಕೆಯಲ್ಲಿ ಹೆಚ್ಚು ಮನ್ನಣೆಗೊಂಡಿರುವ ಹಿರಿಯ ಕಲಾವಿದ ಕಲ್ಲೇನಹಳ್ಳಿ ಗ್ರಾಮದ ಪ್ರೌಢಶಾಲೆಯ ನಿವೃತ್ತ ಮುಖ್ಯಶಿಕ್ಷಕ ಕೆ.ಆರ್.ಕರಿಬಸಪ್ಪ ಅವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಸರ್ವ ಸದಸ್ಯರ ಸರ್ವಾನುಮತದಿಂದ ಆಯ್ಕೆಗೊಳಿಸಲಾಗಿದೆ ಎಂದರು.
ಡಾ. ಗೊ.ರು.ಚನ್ನಪ್ಪ, ಕುವೆಂಪು ವಿವಿ ಕುಲಪತಿ ಪ್ರೊ. ಶರತ್ ಅನಂತಮೂರ್ತಿ, ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಪ್ರೊ. ಹಿ.ಶಿ.ರಾಮಚಂದ್ರಗೌಡ, ಹಂಪಿ ವಿವಿ ಕುಲಪತಿ ಪ್ರೊ. ಹಿ.ಚಿ.ಬೋರಲಿಂಗಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್, ಜಿಲ್ಲೆಯ ಶಾಸಕರು ಭಾಗವಹಿಸಲಿದ್ದಾರೆ. ಜಾನಪದ ಗಾಯಕ ಡಾ. ಅಪ್ಪಗೆರೆ ತಿಮ್ಮರಾಜು ಮತ್ತು ಜಿಲ್ಲೆಯ ಜಾನಪದ ಸಾಹಿತಿಗಳು, ಸಂಗೀತಗಾರರು ಸೇರಿದಂತೆ ವಿವಿಧ ಪ್ರಕಾರಗಳ ಕಲಾತಂಡಗಳ ಪ್ರದರ್ಶನದೊಂದಿಗೆ ಅರ್ಥಪೂರ್ಣ ಸಮ್ಮೇಳನಕ್ಕೆ ಕಲ್ಲೇನಹಳ್ಳಿ ಗ್ರಾಮವು ಸಾಕ್ಷಿಯಾಗಲಿದೆ. ಈ ನಿಟ್ಟಿನಲ್ಲಿ ವಿವಿಧ ಉಪಸಮಿತಿಗಳನ್ನು ರಚಿಸಲಾಗುತ್ತದೆ ಎಂದರು.
ಅಜ್ಜಂಪುರ ತಾಲೂಕು ಘಟಕದ ಅಧ್ಯಕ್ಷ ಡಾ. ಮಾಳೇನಳ್ಳಿ ಬಸಪ್ಪ ಮಾತನಾಡಿ, ಹಿರಿಯ ಜಾನಪದ ಕಲಾವಿದರಾದ ಲಿಂಗಪ್ಪ ಅವರ ಜನ್ಮಸ್ಥಳದಲ್ಲಿ ಸಮ್ಮೇಳನ ನಡೆಸುತ್ತಿರುವುದು ಜಾನಪದ ಸೊಗಡುತನಕ್ಕೆ ಮತ್ತಷ್ಟು ಮೆರಗು ತಂದುಕೊಟ್ಟಿದೆ. ಜಾನಪದ ಕಲೆ ಉಳಿಸಿ, ಬೆಳೆಸಲು ಹಾಗೂ ಸಮ್ಮೇಳನದ ಯಶಸ್ವಿಗೆ ಒಗ್ಗಟ್ಟಿನಿಂದ ಶ್ರಮಿಸಲಿದ್ದೇವೆ ಎಂದರು.
ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಗೊಂಡಿರುವ ಕೆ.ಆರ್.ಕರಿಬಸಪ್ಪ ಮಾತನಾಡಿ, ಬಾಲ್ಯದಿಂದಲೂ ಜಾನಪದ ಕಲೆಯ ಬಗ್ಗೆ ಹೆಚ್ಚು ಆಕರ್ಷಿತನಾಗಿದ್ದೆ. ಇಂದಿಗೂ ಕಲೆಯ ಜೀವಂತಿಕೆ ಉಳಿಸಲು ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಕಲೆಯ ಪ್ರೋತ್ಸಾಹಕ್ಕೆ ಪರಿಷತ್ತಿನ ಜಿಲ್ಲಾ ಘಟಕವು ಸಮ್ಮೇಳನಾಧ್ಯಕ್ಷನಾಗಿ ಆಯ್ಕೆಗೊಳಿಸಿರುವುದು ಆತ್ಮತೃಪ್ತಿ ನೀಡಿದೆ ಎಂದರು.
ಪರಿಷತ್‌ನ ರಾಜ್ಯ ಉಪಾಧ್ಯಕ್ಷ ಗೊಂಡೆದಹಳ್ಳಿ ತಿಪ್ಪೇಶ್, ಪ್ರಮುಖರಾದ ಚಿಕ್ಕನಲ್ಲೂರು ಜಯಣ್ಣ, ಶಿವನಿ ಹೋಬಳಿ ಅಧ್ಯಕ್ಷ ಕಾರೆಹಳ್ಳಿ ಬಸಪ್ಪ, ಬಸವರಾಜಪ್ಪ, ಗ್ರಾಪಂ ಉಪಾಧ್ಯಕ್ಷೆ ಸರೋಜಮ್ಮ, ಸದಸ್ಯರಾದ ನಾಗರಾಜ, ಮಲ್ಲೇಶಪ್ಪ, ಗಂಗಣ್ಣ, ಸಿದ್ದರಾಮಪ್ಪ, ರಾಜಣ್ಣ, ಕರಿಬಸಪ್ಪ, ಎಸ್.ಗಂಗಾಧರಪ್ಪ, ಕೆ.ಶಂಕರಪ್ಪ, ಮಹ್ಮದ್ ಅಹಮದ್, ಗ್ರಾಮಸ್ಥರು ಇದ್ದರು.