ವಿಜಯವಾಣಿ ಸುದ್ದಿಜಾಲ ಉಡುಪಿ
ಸ್ವರ್ಣ ನದಿಯ ಕೊರೆತದಿಂದಾಗಿ ಕೃಷಿ ಜಮೀನು ಹಾನಿಯಾಗುತ್ತಿದೆ. ಅಲ್ಲದೆ, ರೈಲ್ವೆ ಸೇತುವೆಗೂ ಸಹ ಅಪಾಯವಾಗಲಿದೆ. ಹೀಗಾಗಿ ಪೆರಂಪಳ್ಳಿ ಪ್ರದೇಶದಲ್ಲಿ ಶಾಶ್ವತ ತಡೆಗೋಡೆ ನಿರ್ಮಾಣ ಮಾಡಬೇಕು ಎಂದು ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಉಡುಪಿ ಜಿಲ್ಲಾ ಕೃಷಿಕ ಸಂಘ ಮನವಿ ನೀಡಿದೆ.
ಸಂಘದ ಉಪಾಧ್ಯಕ್ಷ ಶ್ರೀನಿವಾಸ ಬಲ್ಲಾಳ ಮಾತನಾಡಿ, ಮಳೆಗಾಲ ಆರಂಭದಲ್ಲಿಯೇ ಪೆರಂಪಳ್ಳಿಯ ಹೊಂಯಿಗೆ ಕುದ್ರು, ತೋಟದ ಮನೆ, ಪಾಸ್ ಕುದ್ರು ಪ್ರದೇಶದ ಹಲವು ರೈತರ ಕೃಷಿ ಜಮೀನು ಕುಸಿತಗೊಂಡಿದೆ. ಅನೇಕ ಕೃಷಿಕರ ಜಮೀನು ಮತ್ತು ತೆಂಗಿನ ಮರಗಳು ನದಿ ಪಾಲಾಗಿವೆ. ಇದನ್ನು ಹೀಗೆಯೇ ನಿರ್ಲಕ್ಷಿಸಿದರೆ ಮುಂದಿನ ದಿನಗಳಲ್ಲಿ ನದಿ ಕೊರೆತ ಇನ್ನಷ್ಟು ಹೆಚ್ಚಾಗಲಿದೆ. ಸಮೀಪದಲ್ಲೇ ಇರುವ ಕೊಂಕಣ ರೈಲ್ವೆಯ ಸೇತುವೆಗೂ ಅಪಾಯ ತಪ್ಪಿದ್ದಲ್ಲ. ಉಡುಪಿ ಜಿಲ್ಲಾ ಕೃಷಿಕ ಸಂಘದ ಪೆರಂಪಳ್ಳಿ ವಲಯ ಸಮಿತಿಯು ಈಗಾಗಲೇ ನಗರಸಭೆ ಹಾಗೂ ಕ್ಷೇತ್ರದ ಶಾಸಕರಿಗೂ ಈ ವಿಷಯ ತಿಳಿಸಿದೆ ಎಂದರು.
ಮನವಿ ಸ್ವೀಕರಿಸಿದ ಸಚಿವೆ ಲಕ್ಷ್ಮೀ, ಈ ಕುರಿತು ಶೀಘ್ರ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಜಿಲ್ಲಾ ಕೃಷಿಕ ಸಂಘದ ಕಾರ್ಯದರ್ಶಿ ರವೀಂದ್ರ ಗುಜ್ಜರಬೆಟ್ಟು, ವಲಯ ಸಮಿತಿಯ ಅಧ್ಯಕ್ಷ ರವೀಂದ್ರ ಪೂಜಾರಿ ಶೀಂಬ್ರ, ಕಾರ್ಯದರ್ಶಿ ಚಂದ್ರಶೇಖರ, ಸುಬ್ರಹ್ಮಣ್ಯ ಶ್ರೀಯಾನ್, ಜೋಸಿ ಪಿಂಟೋ, ಅನಿಲ್ ಗೊನ್ಸಾಲ್ವಿಸ್, ರಮೇಶ್ ಬಂಗೇರ ಇತರರಿದ್ದರು.