ಮಂಡ್ಯ: ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ಖಂಡಿಸಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ನಗರದಲ್ಲಿ 21ನೇ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಮೈಸೂರು-ಬೆಂಗಳೂರು ಹೆದ್ದಾರಿಯ ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆ ಧರಣಿ ನಡೆಸಿ ಪ್ರತಿಭಟನಾಟಕಾರರು, ಕಾವೇರಿ ನೀರಿನ ವಿಷಯದಲ್ಲಿ ನ್ಯಾಯ ಕೊಡಿಸುವಂತೆ ಘೋಷಣೆ ಕೂಗಿದರು.
ಸಮಿತಿಯ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ ಮಾತನಾಡಿ, ಮುಂಗಾರು ಅಧಿವೇಶನದಲ್ಲಿ ಕಾವೇರಿ ನದಿ ನೀರಿನ ವಿಷಯವನ್ನೇ ಗಂಭೀರವಾಗಿ ಪರಿಗಣಿಸಿ ವಿಚಾರವನ್ನು ಅಜೆಂಡಾದಲ್ಲಿ ಇಟ್ಟು ಚರ್ಚೆ ಮಾಡಲು ಅವಕಾಶ ಮಾಡಬೇಕು. ಕಾವೇರಿ ಕಣಿವೆ ಭಾಗದ ಎಂಟು ಕ್ಷೇತ್ರ ಸಂಸತ್ ಸದಸ್ಯರು ಸೇರಿ ಈ ವಿಷಯವನ್ನು ಸಂಸತ್ ಮುಂಗಾರು ಅಧಿವೇಶನದಲ್ಲೂ ಚರ್ಚೆ ಆಗುವ ಕ್ರಮ ವಹಿಸಬೇಕು. ವಿಧಾನಸಭೆ ಮತ್ತು ಲೋಕಸಭೆ ಅಧಿವೇಶನದಲ್ಲಿ ಚರ್ಚೆ ಆಗದ ಹೊರತು ಮುಂದಿನ ಕ್ರಮ ಕೈಗೊಳ್ಳುವುದಕ್ಕೆ ಸಾಧ್ಯವಿಲ್ಲ. ಹೊರಗಡೆ ನೂರು ಸಲ ಮಾತಾನಾಡಿದರೂ ಪ್ರಯೋಜನ ಇಲ್ಲ. ರಾಜ್ಯಸರ್ಕಾರ ಕಾವೇರಿ ನೀರಿನ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯ ಮಾಡಿದರು.
ಸರ್ಕಾರ ಲಭ್ಯ ಆದ ನೀರನ್ನು ಸಂರಕ್ಷಣೆ ಮಾಡಿ ಬಳಕೆ ಮಾಡಿಲ್ಲ. ನಾಲೆ ದುರಸ್ತಿಗೆ 330 ಕೋಟಿ ರೂ ವ್ಯಯ ಆಗುತ್ತಿದೆ. ನಾಲೆ ದುರಸ್ತಿ ಕಾಮಗಾರಿ ತ್ವರಿತವಾಗಿ ಆಗಿಯೇ ಇಲ್ಲ. ಜೂನ್ ಮೊದಲನೇ ವಾರದಿಂದಲೇ ನಮಗೆ ನೀರು ಕೊಡಬೇಕಿತ್ತು. ಈಗಾಗಲೇ ಎರಡು ಕಟ್ಟು ನೀರು ಬರಬೇಕಿತ್ತು. ಆದರೆ ನೀರು ಬಿಡುವ ಯಾವ ಸೂಚನೆಯೂ ಇಲ್ಲ. ಸರ್ಕಾರ ಕಾವೇರಿ ನದಿ ನೀರಿನ ಪ್ರಾಧಿಕಾರದ ಆದೇಶಗಳನ್ನು ಮೀರಿ ಇನ್ನು ಯಾವ ವಿಷಯದಲ್ಲಿ ಗಂಭೀರತೆ ತೋರಬೇಕು. ಮೇಕೆದಾಟು ಯೋಜನೆಗೆೆ ಪಾದಯಾತ್ರೆ ಮಾಡಿದವರು ಈಗ ಅದರ ಆಗುಹೋಗುಗಳನ್ನು ಚರ್ಚೆ ಮಾಡಲಿ. ನೀರಾವರಿ ಸಚಿವರಿಗೆ ಈ ಜವಾಬ್ದಾರಿನೇ ಮೊದಲನೆಯದಾಗಿರಬೇಕು. ಬೆಳೆ ಪರಿಹಾರ, ಬರಪರಿಹಾರ ಯಾವುದು ಕೂಡ ಸಮರ್ಪಕವಾಗಿ ರೈತರ ಖಾತೆಗೆ ಜಮಾ ಆಗಿಲ್ಲ. ನೋಂದಣಿ ಮಾಡಿರುವ ರೈತರಿಗೂ ಕೂಡ ಬಂದಿಲ್ಲ. ಇದು ಎಲ್ಲವನ್ನು ಸಹಿಸಿಕೊಂಡು ಸಾಮಾನ್ಯ ಜನ ನಾವು ಭೂಮಿ ನಂಬಿ ಬದುಕುವರು ಹೇಗೆ ಜೀವನ ಮಾಡಬೇಕು. ಇದು ಗಂಭೀರವಾದ ವಿಷಯವಲ್ವಾ ಎಂದು ಕಿಡಿಕಾರಿದರು.
ಮೈಷುಗರ್ ಕಾರ್ಖಾನೆಯ ಸ್ಥಿತಿಗತಿಯ ಬಗ್ಗೆ ಸುದೀರ್ಘವಾದ ಚರ್ಚೆ ನಡೆದಿದೆ. ಕಾರ್ಖಾನೆ ವ್ಯಾಪ್ತಿಯಲ್ಲಿ 2 ಲಕ್ಷ ಟನ್ ಕಬ್ಬು ಒಪ್ಪಿಗೆ ಆಗಿದೆ. ರಿಕವರಿ ಕಡಿಮೆ ಆಗಲಿದೆ ಎನ್ನುವ ಕಾರಣಕ್ಕೆ ಕಾರ್ಖಾನೆ ಪ್ರಾರಂಭಿಸುವುದು ತಡ ಮಾಡುವುದು ಬೇಡ. ಕಬ್ಬನ್ನು ಆದ್ಯತೆಯ ಮೇಲೆ ಅರೆಯಲಿ ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಎಂಎಲ್‌ಸಿ ಕೆ.ಟಿ.ಶ್ರೀಕಂಠೇಗೌಡ, ರೈತ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಬೋರಯ್ಯ, ರೈತ ಸಂಘದ ಇಂಡುವಾಳು ಚಂದ್ರಶೇಖರ್, ಮುದ್ದೇಗೌಡ, ಜೈ ಕರ್ನಾಟಕ ಪರಿಷತ್ ರಾಜ್ಯಾಧ್ಯಕ್ಷ ಎಸ್.ನಾರಾಯಣ್, ಎಂ.ಎಲ್.ತುಳಸಿಧರ್, ಬೋರಲಿಂಗಯ್ಯ, ದಸಂಸದ ಎಂ.ವಿ. ಕೃಷ್ಣ, ಫಯಾಜ್, ಎಸ್.ಪಿ.ನಾರಾಯಣಸ್ವಾಮಿ ಇತರರಿದ್ದರು.