ಜಿಲ್ಲೆ

ಮಳೆಗಾಲದ ಮೊದಲೇ ಮುನ್ನೆಚ್ಚರಿಕೆ ವಹಿಸಿ...

ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಸೂಚನೆ

ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಮುಂಬರಲಿರುವ ಮಳೆಗಾಲದಲ್ಲಿ ಹೆಚ್ಚಿನ ರೀತಿಯಲ್ಲಿ ಪ್ರಕೃತಿ ವಿಕೋಪ, ವಿಪತ್ತು ಸಂಭವಿಸಿದಲ್ಲಿ ತುರ್ತಾಗಿ ಪರಿಹಾರ ಕಾರ್ಯ ಕೈಗೊಳ್ಳಲು ಮುಂಚಿತವಾಗಿಯೇ ಅಗತ್ಯವಿರುವ ಎಲ್ಲ ರೀತಿಯ ತಯಾರಿ ಮಾಡಿಕೊಳ್ಳಬೇಕು. ಜನರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕೂಡಲೇ ಸ್ಪಂದಿಸಲು ಸನ್ನದ್ಧರಾಗಿರಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಸೂಚಿಸಿದರು.

ಉಡುಪಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮೇ 12ರಂದು ಸಂಜೆ ಆಯೋಜಿಸಿದ್ದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಮಾತನಾಡಿದರು.

 ಕಳೆದ ವರ್ಷ ರೈತರಿಗೆ ಸಮಸ್ಯೆ

ಹೆಚ್ಚು ಮಳೆಯಿಂದಾಗಿ ಕೃತಕ ನೆರೆಯುಂಟಾಗಿ ಮನೆ ಹಾಗೂ ಕೃಷಿ ಜಮೀನುಗಳಿಗೆ ಹಾನಿಯಾಗುತ್ತದೆ. ಕಳೆದ ವರ್ಷ ಈ ಸಮಸ್ಯೆಯಿಂದ ಕೆಲಭಾಗದಲ್ಲಿ ಸಾರ್ವಜನಿಕರು ತೊಂದರೆ ಅನುಭವಿಸಿದ್ದರು. ಈ ಬಾರಿ ಹಾಗಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದರು.

ಪಾಲನೆಯಾಗದ ಸೂಚನೆ

ರಾಜ ಕಾಲುವೆ, ತೋಡುಗಳಲ್ಲಿ ನೀರು ಸರಾಗವಾಗಿ ಹರಿಯುವಂತೆ ಕ್ರಮವಹಿಸಲು ಎರಡ್ಮೂರು ತಿಂಗಳ ಹಿಂದೆಯೇ ಸೂಚಿಸಿದ್ದೆ. ಇನ್ನೂ ಸಮರ್ಪಕವಾಗಿ ನಿರ್ವಹಿಸಿಲ್ಲ. ಕೂಡಲೇ ತಹಸೀಲ್ದಾರರು ಈ ವಿಚಾರವಾಗಿ ಕ್ರಮ ಕೈಗೊಳ್ಳಬೇಕು. ನದಿಯಲ್ಲಿ ಹೂಳು ತುಂಬಿದ್ದರಿಂದ ಕೆಲವು ಭಾಗಗಳಲ್ಲಿ ಕೃಷಿ ಭೂಮಿಗೆ ನೀರು ನುಗ್ಗಿ ಬೆಳೆ ಹಾನಿಯಾಗುತ್ತಿರುವುದಾಗಿ ರೈತರು ದೂರು ನೀಡಿದ್ದಾರೆ. ಆದ್ಯತೆಯ ಮೇಲೆ ಹೂಳು ತೆರವು ಮಾಡಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.

ಮರಗಳ ತೆರವು ಮಾಡಿ

ಕಳೆದ ವರ್ಷ ಮರ ಉರುಳಿ ಇಬ್ಬರು ಮೃತಪಟ್ಟಿದ್ದರು. ಈ ಬಾರಿ ಜೀವಹಾನಿ ಆಗದಂತೆ ಜಿಲ್ಲೆಯ ಎಲ್ಲ ಗ್ರಾಪಂ ಅಧಿಕಾರಿಗಳು ನೋಡಿಕೊಳ್ಳಬೇಕು. ಅರಣ್ಯ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ, ಅಪಾಯಕಾರಿ ಹಾಗೂ ಬೇರು ಸಡಿಲಗೊಂಡ ಹಳೆಯ ಮರಗಳಿದ್ದಲ್ಲಿ ತೆರವು ಮಾಡಿಸಬೇಕು. ಶಾಲಾ-ಕಾಲೇಜುಗಳ ಕಟ್ಟಡಗಳು ಸರಿಯಿದೆಯೇ ಎಂದು ಪರಿಶೀಲಿಸಬೇಕು. ಗ್ರಾಪಂ ವ್ಯಾಪ್ತಿಯಲ್ಲಿ ಟಾಸ್ಕ್​ಫೋರ್ಸ್​ ಸಮಿತಿ ರಚಿಸಿ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರನ್ನೂ ಸದಸ್ಯರನ್ನಾಗಿ ನೇಮಿಸಬೇಕು. ಒಂದೊಮ್ಮೆ ಜೀವಹಾನಿ ಸಂಭವಿಸಿದ್ದಲ್ಲಿ 24 ಗಂಟೆಯೊಳಗೆ ಕುಟುಂಬದವರಿಗೆ ಪರಿಹಾರ ಒದಗಿಸಬೇಕು ಎಂದರು.

ಸಭೆಯಲ್ಲಿ ಸಹಾಯಕ ಕಮಿಷನರ್​ ರಶ್ಮಿ ಎಸ್​. ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ತಹಸೀಲ್ದಾರರು, ಇಒಗಳು ಉಪಸ್ಥಿತರಿದ್ದರು.

ಕಾನೂನು ಕ್ರಮದ ಎಚ್ಚರಿಕೆ

ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿಗಳಲ್ಲಿ ಮಳೆನೀರು ಸರಾಗವಾಗಿ ಹರಿಯುವಂತೆ ನೋಡಿಕೊಳ್ಳಬೇಕು. ಯಾವ ಪ್ರದೇಶಗಳಲ್ಲಿ ಕಾಮಗಾರಿ ಕ್ರಮ ಕೈಗೊಳ್ಳಬೇಕೆಂದು ಈಗಾಗಲೇ ತಿಳಿಸಿದ್ದರೂ ಸಹ ಹೆದ್ದಾರಿ ಇಲಾಖೆಗಳ ಇಂಜಿನಿಯರ್​ಗಳು ಮೌನವಾಗಿ ಕುಳಿತಿದ್ದಾರೆ. ಕೂಡಲೇ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ವಿಪತ್ತು ನಿರ್ವಹಣಾ ಕಾಯಿದೆ ಪ್ರಕಾರ

ಎಫ್​ಐಆರ್​ ದಾಖಲಿಸಿ, ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿ ಎಚ್ಚರಿಕೆ ನೀಡಿದರು.

ಸುಳ್ಳು ಮಾಹಿತಿ ಶೇರ್​ ಮಾಡಬೇಡಿ

ಜಿಲ್ಲಾ ಪೊಲೀಸ್​ ವರಿಷ್ಠ ಡಾ. ಕೆ.ಅರುಣ ಮಾತನಾಡಿ, ಪಾಕ್​ ವಿರುದ್ಧ ಯುದ್ಧ ಸ್ಥಿತಿ ಮುಂದುವರಿದಿದ್ದು, ಜಿಲ್ಲೆಯಲ್ಲೂ ಅಗತ್ಯ ಕಾನೂನು ಸುವ್ಯವಸ್ಥೆ ಮಾಡಿದ್ದೇವೆ. ಅಗ್ನಿಶಾಮಕ ದಳದ ಕೇಂದ್ರಗಳೂ ಸನ್ನದ್ಧವಾಗಿವೆ. ಪೌರ ರಕ್ಷಣಾ ವ್ಯವಸ್ಥೆ ಬಲಪಡಿಸಲು 400ಕ್ಕೂ ಹೆಚ್ಚು ಸ್ವಯಂ ಸೇವಕರನ್ನು ಗುರುತಿಸಿದ್ದೇವೆ. 18 ವರ್ಷ ಮೇಲ್ಪಟ್ಟ ಎನ್​ಎಸ್​ಎಸ್​ ಹಾಗೂ ಎನ್​ಸಿಸಿ ಸ್ವಯಂ ಸೇವಕರಿಗೂ ತರಬೇತಿ ನೀಡಿ, ಅಗತ್ಯವಿದ್ದಲ್ಲಿ ಅವರನ್ನೂ ನಿಯೋಜಿಸಲಾಗುವುದು. ಕರಾವಳಿ ಕಾವಲು ಪಡೆಯವರೂ ಹೆಚ್ಚಿನ ಭದ್ರತೆ ಒದಗಿಸಿದ್ದಾರೆ. ಜಿಲ್ಲೆಯಲ್ಲಿ ಡ್ರೋನ್​ಗಳ ಬಳಕೆ ಮಾಡುವಂತಿಲ್ಲ. ಜಿಲ್ಲಾಡಳಿತ ಹೊರತು ಪಡಿಸಿ ಇನ್ನಿತರ ಕಡೆಗಳಿಂದ ಬರುವ ಸುಳ್ಳು ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವಂತಿಲ್ಲ ಎಂದರು. 
ಕದನ ಪರಿಸ್ಥಿತಿ ಇರುವ ಹಿನ್ನೆಲೆಯಲ್ಲಿ ಕೇಂದ್ರ-ರಾಜ್ಯ ಸರ್ಕಾರದ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಬೇಕು. ಸೂಚಿತ ಪ್ರಮುಖ ಸ್ಥಳಗಳಲ್ಲಿ ಹೆಚ್ಚಿನ ಭದ್ರತೆ ಕೈಗೊಳ್ಳಬೇಕು. ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅಕ್ರಮ ದಾಸ್ತಾನು, ಕಳ್ಳ ಸಂತೆ ಮೇಲೆ ನಿಗಾ ವಹಿಸಲಾಗಿದೆ. ಅನಗತ್ಯವಾಗಿ ಅಗತ್ಯ ಸಾಮಾಗ್ರಿಗಳ ಬೆಲೆ ಹೆಚ್ಚು ಮಾಡುವ ಪ್ರಯತ್ನಗಳನ್ನೂ ತಡೆಯಬೇಕು. | ಡಾ. ಕೆ.ವಿದ್ಯಾಕುಮಾರಿ. ಜಿಲ್ಲಾಧಿಕಾರಿ