ಜಿಲ್ಲೆ

ಬಿಸಿಗಾಳಿ ರಕ್ಷಣಾತ್ಮಕ ಕ್ರಮದ ಬಗ್ಗೆ ಅರಿವು ಮೂಡಿಸಲು ಡಿಸಿ ಕರೆ

ಗೋಪಾಲಕೃಷ್ಣ ಪಾದೂರ್

ಉಡುಪಿ: ಜಿಲ್ಲೆಯಲ್ಲಿ ದಿನೇ ದಿನೇ ವಾತಾವರಣದಲ್ಲಿನ ಉಷ್ಣಾಂಶ ಹೆಚ್ಚುತ್ತಿದೆ. ಸಾರ್ವಜನಿಕರು ಬಿಸಿಗಾಳಿ ಹಾಗೂ ಶಾಖದಿಂದ ತಮ್ಮ ದೇಹದ ಆರೋಗ್ಯ ರಕ್ಷಣೆಗೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಅರಿವು ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾ ಕುಮಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಾರ್ಚ್​ ತಿಂಗಳಿನಲ್ಲಿಯೇ 39 ಡಿಗ್ರಿ ಸೆಲ್ಸಿಯಶ್​ ನಷ್ಟು ಉಷ್ಣಾಂಶವಿದೆ. ಮುಂಬರುವ ಏಪ್ರಿಲ್​ ಹಾಗೂ ಮೇ ಮಾಹೆಯಲ್ಲಿ ಉಷ್ಣಾಂಶವು ಮತ್ತಷ್ಟು ಹೆಚ್ಚುವ ಸಾಧ್ಯತೆಗಳಿವೆ. ಇದರಿಂದಾಗಿ ಹೀಟ್​ ವೇವ್​ ಸ್ಟ್ರೋಕ್​ನಿಂದ ಮನುಷ್ಯನ ದೇಹದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಗಳಿದ್ದು, ಹೆಚ್ಚು ಹೆಚ್ಚು ನೀರು ಸೇವನೆ, ವಿಶ್ರಾಂತಿ, ಬಿಸಿಲಿನಲ್ಲಿ ಮಾಡುವ ಕೆಲಸದ ಅವಧಿ ಬದಲಾವಣೆ ಸೇರಿದಂತೆ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಬೇಕು ಎಂದರು.

ಸಿಡಿಲಿನ ಬಗ್ಗೆ ಎಚ್ಚರ ಅಗತ್ಯ

ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ ಸಿಡಿಲು-ಗುಡುಗು ಗಳಿಂದ ಮಾನವನ ಹಾನಿ ಉಂಟಾಗಿತ್ತು. ಸಿಡಿಲು-ಗುಡುಗು ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸಿ, ಸಾವು-ನೋವುಗಳು ಉಂಟಾಗದಂತೆ ಸೂಕ್ತ ಕ್ರಮ ವಹಿಸಬೇಕು. ವಿದ್ಯುತ್​ಚ್ಛಕ್ತಿ ಸರಬರಾಜಿನ ಹಾಳಾದ ಕಂಬಗಳು, ನೇತಾಡುವ ತಂತಿಗಳ ತೆರವು ಕಾರ್ಯ ಆದ್ಯತೆಯ ಮೇಲೆ ಕೈಗೊಳ್ಳಬೇಕು. ಯಾವುದೇ ಭಾಗದಲ್ಲಿ ವಿದ್ಯುತ್​ಚ್ಛಕ್ತಿ ಸರಬರಾಜಿನ ದುರಸ್ಥಿಗಾಗಿ ವಿದ್ಯುತ್​ ವ್ಯತ್ಯಯ ಉಂಟುಮಾಡುವ ಸಂದರ್ಭದಲ್ಲಿ ಸಾರ್ವಜನಿಕರಿಗೆ ಪ್ರಕಟಣೆಯ ಮೂಲಕ ಮಾಹಿತಿ ನೀಡಬೇಕೆಂದು ಸೂಚನೆ ನೀಡಿದರು.

ಬೇಸಿಗೆಯಲ್ಲಿ ಬೆಂಕಿ ಅವಘಡಗಳು ಉಂಟಾಗುವ ಸಾಧ್ಯತೆಗಳು ಹೆಚ್ಚು ಇರುವ ಹಿನ್ನೆಲೆ, ಅಗ್ನಿ ಶಾಮಕ ದಳದವರು ಸದಾ ಸನ್ನದ್ಧರಾಗಿರಬೇಕು. ಅಗ್ನಿ ನಂದಿಸುವ ವಾಹನಗಳ ಕೊರತೆಯಿದ್ದಲ್ಲಿ ಕೂಡಲೆ ಸರ್ಕಾರಕ್ಕೆ ಪತ್ರ ಬರೆದು ತರಿಸಿಕೊಳ್ಳಬೇಕು ಎಂದರು.

ನೆರೆಯಿಂದ ತೊಂದರೆ ಉಂಟಾಗುವ ಗ್ರಾಮ ಅಥವಾ ವಾರ್ಡ್​ಗಳ ಪ್ರವಾಹ ಪೀಡಿತ ಪ್ರದೇಶಗಳ ನಿರ್ವಹಣೆ ಯೋಜನೆಗಳನ್ನು ತಯಾರಿಸಿ ಇಟ್ಟುಕೊಳ್ಳಬೇಕು. ಶಾಲೆ ಹಾಗೂ ಅಂಗನವಾಡಿ ಕಟ್ಟಡಗಳ ಸಾಮರ್ಥ್ಯದ ದೃಢೀಕರಣ ಪತ್ರಗಳನ್ನು ಅಭಿಯಂತರರಿಂದ ಪಡೆದು, ಆಯಾ ಇಲಾಖೆಗೆ ಸಲ್ಲಿಸಬೇಕು ಎಂದರು.

ಖಾಸಗಿ ಬೋರ್​ವೆಲ್​ ಗಳಿಂದ ನೀರು ಒಪ್ಪಂದ

ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತಿಕ್​ ಬಾಯಲ್​ ಮಾತನಾಡಿ, ಕಳೆದ ಸಾಲಿನಲ್ಲಿ ಗ್ರಾಮೀಣ ಭಾಗದ ಕೆಲವು ಪ್ರದೇಶಗಳಲ್ಲಿ ಕುಡಿಯುವ ನೀರಿನ ಸರಬರಾಜಿನಲ್ಲಿ ತೊಂದರೆ ಉಂಟಾಗಿತ್ತು. ಈಗಾಗಲೇ ಸಂಬಂಧಪಟ್ಟ ಗ್ರಾಮ ಪಂಚಾಯತಿಗಳಿಗೆ ನೀರಿನ ಸಮಸ್ಯೆ ಬಗೆಹರಿಸಲು ಖಾಸಗಿ ಬೋರ್​ವೆಲ್​ಗಳಿಂದ ನೀರು ಪಡೆಯಲು ಒಪ್ಪಂದ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್​ ಗದ್ಯಾಳ, ಕುಂದಾಪುರ ಡಿ.ಎಫ್​.ಓ ಗಣಪತಿ, ಕಾರ್ಕಳ ವನ್ಯಜಿವಿ ವಿಭಾಗದ ಡಿ.ಎಫ್​.ಓ ಶಿವರಾಮ ಎಂ ಬಾಬು, ಎಎಸ್​ಪಿ ಸಿದ್ದಲಿಂಗಪ್ಪ, ಸಹಾಯಕ ಕಮೀಷನರ್​ ಮಹೇಶ್ಚಂದ್ರ ಮತ್ತಿತರರು ಉಪಸ್ಥಿತರಿದ್ದರು.