ಮಂಡ್ಯ: ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಕೊರತೆಯಾಗದಂತೆ ಅವಶ್ಯಕ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಕುಮಾರ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ತುರ್ತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಟ್ಯಾಂಕರ್ ಹಾಗೂ ಖಾಸಗಿ ಬೋರ್‌ವೆಲ್ ಮೂಲಕ ನೀರು ಒದಗಿಸುತ್ತಿರುವ ಗ್ರಾಮಗಳಿಗೆ ತಹಸೀಲ್ದಾರ್ ಹಾಗೂ ತಾಲೂಕು ಪಂಚಾಯಿತಿ ಇಒ ಕಡ್ಡಾಯವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದರು.
ಜಿಲ್ಲೆಯಲ್ಲಿ ಕುಡಿಯುವ ನೀರೊದಗಿಸಲು ಕಳೆದ ಎರಡು ತಿಂಗಳಿನಿಂದ ಜೆಜೆಎಂ ಹಾಗೂ ಕಂಟೆಜೆನ್ಸಿ ಯೋಜನೆಯಡಿ 164 ಹೊಸ ಬೋರ್‌ವೆಲ್ಗಳನ್ನು ಕೊರೆಯಲಾಗಿದೆ. ಕುಡಿಯುವ ನೀರಿನ ಅವಶ್ಯಕತೆಗೆ ಜಿಲ್ಲಾಡಳಿತ ನಿರಂತರವಾಗಿ ಸ್ಪಂದಿಸುತ್ತಿದ್ದು, ಸಾರ್ವಜನಿಕರು ಸಹ ನೀರು ಪೋಲಾಗದಂತೆ ಎಚ್ಚರಿಕೆ ವಹಿಸಬೇಕು ಎಂದರು.
ಉಪವಿಭಾಗಾಧಿಕಾರಿ ಟಾಸ್ಕ್‌ಫೋರ್ಸ್ ಸಮಿತಿ ಅಧ್ಯಕ್ಷರಾಗಿದ್ದು, ಪ್ರತಿವಾರ ಸಭೆ ನಡೆಸಿ ಕುಡಿಯುವ ನೀರಿನ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ಕುಡಿಯುವ ನೀರಿನ ಸಮಸ್ಯೆ ಉಲ್ಭಣವಾಗುವ ಗ್ರಾಮಗಳನ್ನು ಪಟ್ಟಿ ಮಾಡಿಕೊಂಡು ಯೋಜನೆಗಳನ್ನು ರೂಪಿಸಿಕೊಳ್ಳಿ. ಬರ ಪರಿಸ್ಥಿತಿ ಸಂದರ್ಭದಲ್ಲಿ ಖಾಸಗಿ ಬೋರ್‌ವೆಲ್ಗಳನ್ನು ವಶಕ್ಕೆ ಪಡೆಯುವ ಅಧಿಕಾರವನ್ನು ತಹಸೀಲ್ದಾರ್ ಹೊಂದಿದ್ದು, ಗ್ರಾಮದಲ್ಲಿ ಲಭ್ಯವಿರುವ ಖಾಸಗಿ ಬೋರ್‌ವೆಲ್ ಗಳನ್ನು ಪಟ್ಟಿ ಮಾಡಿಕೊಳಿ. ಕುಡಿಯುವ ನೀರಿನ ಉಪಯೋಗಕ್ಕಾಗಿ ಬಳಸುತ್ತಿರುವ ಬೋರ್‌ವೆಲ್ ಗಳ ರಿಡ್ರಿಲ್ಗೆ ರಿಗ್ ಮಾಲೀಕರು ಮೊದಲ ಆದ್ಯತೆ ನೀಡಬೇಕು ಎಂದು ಈಗಾಗಲೇ ತಿಳಿಸಲಾಗಿದೆ. ಒಂದು ವೇಳೆ ಸಹಕರಿಸದಿದ್ದಲ್ಲಿ ಭೂವಿಜ್ಞಾನಿ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಖಾಸಗಿ ಬೋರ್‌ವೆಲ್ನಿಂದ ನೀರು ಪಡೆಯುತ್ತಿರುವ ಕಡೆ ಒಪ್ಪಂದ ಹಾಗೂ ಆದೇಶದ ಪ್ರತಿಯನ್ನು ಜಿಲ್ಲಾಧಿಕಾರಿ ಕಚೇರಿಗೆ ಮೂರು ದಿನದೊಳಗಾಗಿ ಸಲ್ಲಿಸಬೇಕು. ಟ್ಯಾಂಕರ್ ಮೂಲಕ ನೀರು ಪಡೆಯುತ್ತಿದ್ದಲ್ಲಿ ಅವರಿಗೆ ಪ್ರತಿ 15 ದಿನಕೊಮ್ಮೆ ಹಾಗೂ ಖಾಸಗಿ ಬೋರ್‌ವೆಲ್‌ನಲ್ಲಿ ನೀರು ಪಡೆಯುತ್ತಿದ್ದಾರೆ ತಿಂಗಳಿಗೊಮ್ಮೆ ಹಣ ಪಾವತಿ ಮಾಡಬೇಕು. ಖಾಸಗಿ ಬೋರ್‌ವೆಲ್ಗಳ ಮೂಲಕ ದಾನಿಗಳು ಉಚಿತವಾಗಿ ನೀರು ನೀಡುತ್ತಿದ್ದಲ್ಲಿ ಅದಕ್ಕೂ ಸಹ ಪಂಚನಾಮೆ ಮಾಡಿಕೊಂಡು ತಹಸೀಲ್ದಾರ್ ಆದೇಶ ಹೊರಡಿಸಬೇಕು ಎಂದ ಡಿಸಿ, ಅನಧಿಕೃತವಾಗಿ ಪಂಪ್‌ಸೆಟ್ ಮೋಟರ್ ಬಳಸಿ ಕೆರೆಗಳಿಂದ ನೀರು ಪಡೆದು ಕೃಷಿ ಅಥವಾ ಅನ್ಯ ಉದ್ದೇಶಕ್ಕೆ ಬಳಸುತ್ತಿದ್ದರೆ ಮುಲಾಜಿಲ್ಲದೆ ಮೋಟರ್‌ಗಳನ್ನು ಜಪ್ತಿ ಮಾಡಿಕೊಂಡು ಕ್ರಮಕೈಗೊಳ್ಳಿ. ಕುಡಿಯುವ ನೀರು ಸಾರ್ವಜನಿಕರು ಹಾಗೂ ಜಾನುವಾರುಗಳಿಗೆ ಒದಗಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ ಎಂದರು.
ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್ ಮಾತನಾಡಿ, ಬರ ಪರಿಸ್ಥಿತಿ ಹಾಗೂ ಕುಡಿಯುವ ನೀರನ್ನು ಪಡೆಯುತ್ತಿರುವ ಮೂಲಗಳು ಬದಲಾಗಬಹುದು. ಈ ಹಿನ್ನೆಲೆಯಲ್ಲಿ ಕುಡಿಯುವ ನೀರನ್ನು ಲ್ಯಾಬ್ಗಳಲ್ಲಿ ಪರೀಕ್ಷೆಗೆ ಒಳಪಡಿಸಿ. ಟ್ಯಾಂಕರ್ ಹಾಗೂ ಖಾಸಗಿ ಬೋರ್‌ವೆಲ್ ಮೂಲಕ ನೀರು ಒದಗಿಸುತ್ತಿರುವ ಗ್ರಾಮಗಳಿಗೆ ದಿಢೀರ್ ಭೇಟಿ ನೀಡಲಿದ್ದು, ದಾಖಲೆಗಳನ್ನು ಅಧಿಕಾರಿಗಳು ಸರಿಯಾಗಿ ನಿರ್ವಹಿಸಬೇಕು. ಯಾವುದೇ ಲೋಪ ಕಂಡು ಬಂದರು ಕ್ರಮ ವಹಿಸುವುದಾಗಿ ಎಚ್ಚರಿಕೆ ನೀಡಿದರು.
ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಮಾತನಾಡಿ, ಜನರಿಗೆ ಮಿತವಾಗಿ ನೀರು ಬಳಸುವುದರ ಬಗ್ಗೆ ಜಾಗೃತಿ ಮೂಡಿಸಿ. ಟ್ಯಾಂಕರ್‌ನಿಂದ ನೀರು ಒದಗಿಸುವ ಮೊದಲು ಸುತ್ತಲೂ ಯಾವುದೇ ಖಾಸಗಿ ಬೋರ್‌ವೆಲ್ನಿಂದ ನೀರು ಪಡೆಯಲು ಸಾಧ್ಯವಿಲ್ಲ ಎಂಬುದನ್ನು ಖಾತ್ರಿ ಪಡೆದುಕೊಳ್ಳುವುದು ಉತ್ತಮ ಎಂದು ಸಲಹೆ ನೀಡಿದರು.
ಕೆ.ಆರ್.ಪೇಟೆ ತಾಲೂಕಿನ ಮುರುಗನಕೊಪ್ಪಲು ಹಾಗೂ ಹೊಸೂರು, ಮದ್ದೂರು ತಾಲೂಕು ಚಿಕ್ಕೋನಹಳ್ಳಿ ಹಾಗೂ ಮಂಡ್ಯ ತಾಲೂಕು ಪಂಚೆಗೌಡನಹಳ್ಳಿ ಹಾಗೂ ತಿಮ್ಮನಹೊಸೂರು, ಬಸರಾಳು ಗ್ರಾಮಕ್ಕೆ ಟ್ಯಾಂಕರ್ ಮೂಲಕ ನೀರನ್ನು ಪೂರೈಸಲಾಗುತ್ತಿದೆ ಎಂದು ಆಯಾ ತಹಸೀಲ್ದಾರ್ ಸಭೆಗೆ ಮಾಹಿತಿ ಒದಗಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಶಿವರಾಜು, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ತುಷಾರಮಣಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ಎಸ್.ಎಚ್.ನಿರ್ಮಲಾ ಇತರರಿದ್ದರು.