ಜಿಲ್ಲೆ

ಜಿಲ್ಲೆಯಲ್ಲಿ ಇತಿ ಮಿತಿಯಿಲ್ಲದೇ ಅನಧಿಕೃತವಾಗಿ ಕೆರೆಯಿಂದ ಮಣ್ಣು ಸಾಗಾಟ: ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ ನೀಡಿದ ಜಿಲ್ಲಾಧಿಕಾರಿ…!

ಕೆ.ಎನ್.ರಾಘವೇಂದ್ರ

ಮಂಡ್ಯ: ಜಿಲ್ಲೆಯಲ್ಲಿ ನೀರು ಬತ್ತಿ ಹೋಗಿರುವ ಕೆರೆಗಳಲ್ಲಿ ರೈತರು ಅನಧಿಕೃತವಾಗಿ ಮಣ್ಣನ್ನು ಇತಿ ಮಿತಿಯಿಲ್ಲದೇ ತೆಗೆಯುತ್ತಿದ್ದಾರೆಂಬ ದೂರುಗಳು ಕೇಳಿ ಬರುತ್ತಿದೆ. ಮಾತ್ರವಲ್ಲದೆ ಸಾಗಿಸುವಾಗ ರಸ್ತೆಯ ಮೇಲೆಲ್ಲ ಮಣ್ಣು ಹಾಗೂ ಧೂಳು ಚೆಲ್ಲುತ್ತಿದ್ದೂ, ವಾಹನ ಸವಾರರಿಗೆ ತುಂಬಾ ತೊಂದರೆ ಉಂಟಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ತುರ್ತು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ವಿಪತ್ತು ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಅತಿಯಾದ ಬಿಸಿಲಿನ ತಾಪಮಾನ ಹಾಗೂ ಮಳೆ ಬಾರದೆ ಇರುವುದರಿಂದ ಕೆರೆಗಳೆಲ್ಲ ಬತ್ತಿ ಹೋಗಿವೆ. ಮುಂದಿನ ದಿನಗಳಲ್ಲಿ ಮಳೆಗಾಲ ಬರುವುದರಿಂದ ನೀರಿನ ಶೇಖರಣೆ ಮಾಡಲು ಕೆರೆಗಳಲ್ಲಿ ಹೂಳೆತ್ತುವ ಕಾರ್ಯ ವ್ಯವಸ್ಥಿತವಾಗಿ ಹಾಗೂ ಶೀಘ್ರವಾಗಿ ನಡೆಯಬೇಕು. ತಾಲೂಕುವಾರು ಇದುವರೆಗೂ ಕೆರೆಗಳಲ್ಲಿ ಹೂಳೆತ್ತಿರುವ ಹಾಗೂ ಈ ತಿಂಗಳಲ್ಲಿ ಹೂಳೆತ್ತುವ ಕೆರೆಗಳ ಬಗ್ಗೆ ತಹಸೀಲ್ದಾರ್ ಹಾಗೂ ತಾಲೂಕು ಪಂಚಾಯಿತಿ ಇಒ ಮಾಹಿತಿ ನೀಡಬೇಕು ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್, ಮಂಡ್ಯ ಉಪವಿಭಾಗಾಧಿಕಾರಿ ಮಹೇಶ್, ಜಿಲ್ಲಾ ಕುಟುಂಬ ಮತ್ತು ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್, ಡಿಎಫ್‌ಒ ರಾಜು ಇತರರಿದ್ದರು.