ಅಂಕೋಲಾ: ಕೇಣಿಯಲ್ಲಿ ನಿರ್ಮಾಣವಾಗಲಿರುವ ಉದ್ದೇಶಿತ ಆಳಸಮುದ್ರ ಗ್ರೀನ್ ಫೀಲ್ಡ್ ಬಂದರಿನ ಕುರಿತು ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಹಾಗೂ ಜೆಎಸ್‌ಡಬ್ಲುೃ ಕಂಪನಿ ವತಿಯಿಂದ ಬುಧವಾರ ಪಟ್ಟಣದ ಖಾಸಗಿ ಹೋಟೆಲ್‌ನಲ್ಲಿ ಪತ್ರಕರ್ತರಿಗೆ ಮಾಹಿತಿ ನೀಡಲಾಯಿತು.
ಈ ಜಂಟಿ ಸಭೆಯಲ್ಲಿ ಉಪಸ್ಥಿತರಿದ್ದ ಜೆಎಸ್‌ಡಬ್ಲುೃ ಕಂಪನಿಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ರೇಷ್ಮಾ ಉಲ್ಲಾಳ ಅವರು ಪಿಪಿಟಿ ಮೂಲಕ ಸಮಗ್ರ ಮಾಹಿತಿ ನೀಡಿದರು. ಇದು ರಾಜ್ಯ ಸರ್ಕಾರದ ಯೋಜನೆಯಾಗಿದ್ದು 2022-23ನೇ ಆರ್ಥಿಕ ವರ್ಷದ ಬಜೆಟ್‌ನಲ್ಲಿ ಕರ್ನಾಟಕ ಜಲಸಾರಿಗೆ ಮಂಡಳಿಯ ಮೂಲಕ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಪಿಪಿಪಿ ಮಾದರಿಯಲ್ಲಿ ಗ್ರೀನ್ ಫೀಲ್ಡ್ ಬಂದರನ್ನು ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ 2023ರಲ್ಲಿ ಜೆಎಸ್‌ಡಬ್ಲುೃ ಕೇಣಿ ಪೋರ್ಟ್ ಪ್ರೈವೇಟ್ ಲಿಮಿಟೆಡ್ ಕಂಪನಿ ಜತೆ ಒಪ್ಪಂದ ಮಾಡಿಕೊಂಡಿದೆ. ಮೊದಲ ಹಂತದಲ್ಲಿ ವಾರ್ಷಿಕ 30 ಮೆಟ್ರಿಕ್ ಟನ್ ಸಾಮರ್ಥ್ಯ ಹೊಂದಲಿದ್ದು, ನಂತರದಲ್ಲಿ 92 ಮೆಟ್ರಿಕ್ ಟನ್ ರಪ್ತು ಸಾಮರ್ಥ್ಯ ಹೊಂದಲಿದೆ ಎಂದರು.
ಬಂದರು ಯೋಜನೆಯಿಂದ ರಾಷ್ಟ್ರೀಯ ಹೆದ್ದಾರಿ 66ರವರೆಗೆ 4.5 ಕಿಮೀ ಉದ್ದದ ರಸ್ತೆ ಮತ್ತು 6.5 ಕಿಮೀ ರೈಲ್ವೆ ಸಂಪರ್ಕ ಹೊಂದಲಿದೆ. ರಸ್ತೆ ಸಂಪರ್ಕಕ್ಕಾಗಿ ಭಾವಿಕೇರಿ ಗ್ರಾಮದಲ್ಲಿ 25 ಮನೆ ಸಹಿತ 59 ಎಕರೆ, ಅಂಕೋಲಾ ಗ್ರಾಮದ 25 ಮನೆಗಳ ಸಹಿತ 25 ಎಕರೆ, ಶಿರಕುಳಿ ಗ್ರಾಮದ 18 ಮನೆ ಸಹಿತ 43 ಎಕರೆ, ಅಲಗೇರಿ ಗ್ರಾಮದ 7 ಮನೆ ಸಹಿತ 11 ಎಕರೆ ಒಟ್ಟೂ ಅಂದಾಜು 240 ಎಕರೆ ಜಮೀನು ಸ್ವಾಧೀನಗೊಳ್ಳಲಿದೆ. ಇದಲ್ಲದೆ ಸರಕು ಸಂಗ್ರಹಣೆಗಾಗಿ ಶಿರಕುಳಿಯಲ್ಲಿ 157 ಎಕರೆ, ಅಲಗೇರಿಯಲ್ಲಿ 10 ಎಕರೆ, ಬೊಗ್ರಿಬೈಲ್‌ನಲ್ಲಿ 134 ಎಕರೆ, ಬಾಳೆಗುಳಿಯಲ್ಲಿ 24 ಎಕರೆ ಹೀಗೆ ಒಟ್ಟೂ 324 ಎಕರೆ ಜಮೀನು ಗುರುತಿಸಲಾಗಿದೆ ಎಂದರು.
ಬಂದರು ಹಾಗೂ ಒಟ್ಟಾರೆ ಅಭಿವೃದ್ಧಿಯಿಂದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬರುವುದಕ್ಕೂ ಸಹಕಾರಿಯಾಗಲಿದೆ. ಭೂಸ್ವಾಧೀನಕ್ಕೆ ಒಳಗಾಗುವ ಜಮೀನು, ಕಟ್ಟಡಗಳಿಗೆ ಸರ್ಕಾರದ ನಿಯಮಾನುಸಾರ ಸೂಕ್ತ ಪರಿಹಾರ ಒದಗಿಸುವುದಲ್ಲದೆ ಮೀನುಗಾರರಿಗೆ ಮೂಲಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದರು.
ಯೋಜನಾ ಮುಖ್ಯಸ್ಥ ಭರಮಪ್ಪ ಕುಂಟಗೇರಿ ಮಾತನಾಡಿ, 4 ಸಾವಿರ ಕೋಟಿ ರೂ ವೆಚ್ಚದಲ್ಲಿ ಬಂದರು ನಿರ್ಮಾಣದ ನಂತರ ಅಂಕೋಲಾ ತಾಲೂಕು ಹಾಗೂ ಜಿಲ್ಲೆಯಲ್ಲಿ ಅಭಿವೃದ್ಧಿ ಪರ್ವ ಪ್ರಾರಂಭವಾಗಲಿದೆ ಎಂದರು.
ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಅಧಿಕಾರಿ ಬಸಪ್ಪ ನಾಯರ, ಜೆಎಸ್‌ಡಬ್ಲುೃ ಆಡಳಿತಾಧಿಕಾರಿ ಸರ್ವೇಶ ನಾಯಕ ಇತರರಿದ್ದರು.ರರಿದ್ದರು.