ಕವಲೂರು ಗ್ರಾಮದಲ್ಲಿ ನಡೆದ ಜಲಾನಯನ ಅಭಿವೃದ್ಧಿ ಕಾರ್ಯಕಾರಿಣಿ ಸಮಿತಿ ಗ್ರಾಮಸಭೆಯನ್ನು ಗ್ರಾಪಂ ಅಧ್ಯಕ್ಷೆ ಮಲ್ಲಮ್ಮ ಗಿಡಕ್ಕೆ ನೀರು ಹಾಕಿ ಚಾಲನೆ ನೀಡಿದರು. ಜಿಲ್ಲಾ ಉಪ ಕೃಷಿ ನಿರ್ದೇಶಕ ಸಹದೇವ ಯರಗುಪ್ಪ, ಎಒ ಪ್ರತಾಪಗೌಡ, ಎಎಒ ವೀರೇಶ, ಪ್ರಮುಖರಾದ ಅನ್ನಪೂರ್ಣಾ, ಮುತ್ತಣ್ಣ, ಚನ್ನಬಸಪ್ಪ ಇತರರು ಇದ್ದರು. 
ಜಿಲ್ಲೆ

ಸುಸ್ಥಿರ ಕೃಷಿಗೆ ಜಲಾನಯನ ಪ್ರದೇಶ ಪುನಶ್ಚೇತನ; ಸಹದೇವ ಯರಗುಪ್ಪ ಹೇಳಿಕೆ

ಅಳವಂಡಿ: ಕೃಷಿಯ ಸುಸ್ಥಿರತೆಗಾಗಿ ಭೂ ಸಂಪನ್ಮೂಲಗಳ ಆಧಾರಿತ ವೈಜ್ಞಾನಿಕವಾದ ಜಲಾನಯನ ಅಭಿವೃದ್ಧಿಯ ಮೂಲಕ ಜನರ ಆರ್ಥಿಕ ಮಟ್ಟ ಸುಧಾರಿಸುವುದು ಜಲಾನಯನ ಯೋಜನೆಯ ಮುಖ್ಯ ಗುರಿ ಎಂದು ಜಿಲ್ಲಾ ಉಪ ಕೃಷಿ ನಿರ್ದೇಶಕ ಸಹದೇವ ಯರಗುಪ್ಪ ತಿಳಿಸಿದರು.

ಕವಲೂರು ಗ್ರಾಮದಲ್ಲಿ ಜಿಪಂ, ತಾಪಂ, ಕೃಷಿ ಇಲಾಖೆ, ಕೃಷಿ ಮತ್ತು ಜಲಾನಯನ ಅಭಿವೃದ್ಧಿ ಯೋಜನೆ, ವಿಶ್ವ ಬ್ಯಾಂಕ್ ನೆರವಿನ ರಿವಾರ್ಡ್ ಜಲಾನಯನ ಅಭಿವೃದ್ಧಿ ಯೋಜನೆ, ಕ್ಷೇತ್ರಮಟ್ಟದ ಸರ್ಕಾರೇತರ ಸಂಸ್ಥೆ ಸ್ವೋರ್ಡ-ಕೆ-ಸಾಶ್ವಿಹಳ್ಳಿ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಲಾನಯನ ಅಭಿವೃದ್ಧಿ ಕಾರ್ಯಕಾರಿಣಿ ಸಮಿತಿ ಗ್ರಾಮ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಯೋಜನೆ ವ್ಯಾಪ್ತಿಯ ರೈತರಿಗೆ ಭೂ ಸಂಪನ್ಮೂಲಗಳ ಶಿಫಾರಸು ಆಧರಿಸಿ ಸಲಹಾ ಸೇವೆಗಳನ್ನು ಒದಗಿಸಲಾಗುವುದು. ಮಣ್ಣು ಮತ್ತು ನೀರಿನ ಸಂರಕ್ಷಣೆ ಹಾಗೂ ಅಂತರ್ಜಲ ಮರುಪೂರಣ, ಮಣ್ಣಿನ ತೇವಾಂಶ ಲಭ್ಯತೆ ಮತ್ತು ರಕ್ಷಣಾತ್ಮಕ ನೀರಾವರಿಗಾಗಿ ಮಳೆ ಕೊಯ್ಲು ಮಾಡಲಾವುದು.

ಸೂಕ್ತ ತೋಟಗಾರಿಕೆ ಮತ್ತು ಕೃಷಿ ಅರಣ್ಯ ಚಟುವಟಿಕೆ ಮೂಲಕ ರೈತರ ಆದಾಯ ಮೂಲ ಹಾಗೂ ಹಸಿರು ಹೊದಿಕೆಗಳನ್ನು ಹೆಚ್ಚಿಸುವುದು, ಸಾಗುವಳಿ ಯೋಗ್ಯವಲ್ಲದ ಭೂಮಿಯನ್ನು ಸಾಗುವಳಿ ಯೋಗ್ಯ ಮಾಡುವುದು ಹಾಗೂ ಯೋಜನೆ ನಂತರ ಸಮುದಾಯ ಆಧಾರಿತ ಸಂಸ್ಥೆಗಳಾದ ಕ್ಷೇತ್ರ ಗುಂಪು, ಸ್ವಸಹಾಯ ಸಂಘ, ಜಲಾನಯನ ಕಾರ್ಯಕಾರಿ ಸಮಿತಿ, ಗ್ರಾಪಂಗಳ ಬಲವರ್ಧನೆ ಮಾಡಲಾಗುವುದು ಎಂದರು.

ಗ್ರಾಪಂ ಅಧ್ಯಕ್ಷೆ ಮಲ್ಲಮ್ಮ ಬಿಸರಳ್ಳಿ, ಉಪಾಧ್ಯಕ್ಷೆ ಅನ್ನಪೂರ್ಣಾ ಪೂಜಾರ, ಕೃಷಿ ಅಧಿಕಾರಿ ಪ್ರತಾಪಗೌಡ ನಂದನಗೌಡ್ರ, ವೀರೇಶ ಪಟ್ಟೇದ, ಸ್ವೋರ್ಡ-ಕೆ ಸಂಸ್ಥೆಯ ಕಾರ್ಯದರ್ಶಿ ಚನ್ನಬಸಪ್ಪ, ಸಿಬ್ಬಂದಿ ಗವಿಸಿದ್ದಪ್ಪ, ಮಂಜುನಾಥ, ವೆಂಕಟೇಶ, ಬಸನಗೌಡ, ಸುರೇಶ, ಸಂತೋಷ, ದಿಲೀಪಕುಮಾರ, ಪ್ರಮುಖರಾದ ಉಮೇಶ ವಡ್ಡರ, ಭರಮಪ್ಪ, ಮುತ್ತಣ್ಣ ಬಿಸರಳ್ಳಿ, ಈರಪ್ಪ, ಪಿಎಸ್‌ಐ ನಾಗಪ್ಪ ಇದ್ದರು.